ಮರು ಪರೀಕ್ಷೆ ಬೇಕಿಲ್ಲ, ನಾವು ಪ್ರಾಮಾಣಿಕರು, ನೇಮಕಾತಿ ಆದೇಶ ನೀಡಿ: ಪಿಎಸ್ಐ ಲಿಖಿತ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು 

ಮರು ಪರೀಕ್ಷೆ ಬೇಕಿಲ್ಲ, ನಾವು ಪ್ರಾಮಾಣಿಕರು, ನೇಮಕಾತಿ ಆದೇಶ ನೀಡಿ: ಪಿಎಸ್ಐ ಲಿಖಿತ ಪರೀಕ್ಷೆ ಪಾಸಾಗಿರುವ ಅಭ್ಯರ್ಥಿಗಳು 

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 30, 2022 | 10:24 PM

ಇವರ ನೋವು ಮತ್ತು ಬೇಗುದಿಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಬಂಧು ಬಳಗದವರು, ಸ್ನೇಹಿತರು ತಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇವರು ಕೂಡ ಪರೀಕ್ಷೆಯಲ್ಲಿ ದುರ್ವ್ಯವಹಾರ ನಡೆಸಿ ಪಾಸಾಗಿದ್ದಾರೆ ಅಂತಲೇ ಭಾವಿಸಿದ್ದಾರೆ.

ಬೆಂಗಳೂರು: ಯಾರೋ ನಡೆಸಿದ ಅವ್ಯಹಾರಕ್ಕೆ, ಪಾಪದ ಕೃತ್ಯಗಳಿಗೆ ಇಲ್ಲಿ ಧರಣಿ ಕೂತಿರುವ ಸುಮಾರು 400ಕ್ಕೂ ಹೆಚ್ಚು ಪ್ರಾಮಾಣಿಕ, ಪ್ರತಿಭಾವಂತ ಯುವಕ ಯುವತಿಯರು ಬಲಿಯಾಗಿದ್ದಾರೆ. ಬದುಕಿನ ಬಗ್ಗೆ ಕಂಡ ಕನಸ್ಸು ಈಡೇರುವ ಸಮಯದಲ್ಲೇ ನೀರನಿಂದ ಎತ್ತಿ ದಡಕ್ಕೆ ಬಿಸಾಡಿದ ಮೀನಿನಂಥ ಸ್ಥಿತಿಗೆ ಇವರನ್ನು ದೂಡಲಾಗಿದೆ. 545 ಪಿಎಸ್ ಐ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ ನಡೆದ ಅಕ್ರಮ ಬಯಲಿಗೆ ಬಂದ ಬಳಿಕ ಒಂದು ತರಾತುರಿ ನಿರ್ಧಾರ ತೆಗೆದುಕೊಂಡಿರುವ ಕರ್ನಾಟಕ ಸರ್ಕಾರ ಮರುಪರೀಕ್ಷೆಗೆ ನೀಡಿರುವ ಆದೇಶ ಯಾವುದೇ ದುರ್ವ್ಯಹಾರ ನಡೆಸದೆ ಲಿಖಿತ ಪರೀಕ್ಷೆಯನ್ನು ಪಾಸು ಮಾಡಿ ನೇಮಕಾತಿ ಆದೇಶಕ್ಕಾಗಿ ಎದುರು ನೋಡುತ್ತಿದ್ದ ಯುವಕ ಯುವತಿಯರ ಮೇಲೆ ಬರಸಿಡಿಲಿನಂತೆ ಬಂದೆರಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇವರು ಸೋಮವಾರದಿಂದ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ಪರೀಕ್ಷೆಯಲ್ಲಿ ಕೇವಲ ಒಂದಷ್ಟು ಜನ ದುರ್ವ್ಯಹಾರ ನಡೆಸಿದರೆ ಅದರ ಶಿಕ್ಷೆ ನಮಗ್ಯಾಕೆ, ಸರ್ಕಾರ ತನಿಖೆ ನಡೆಸಲಿ, ಅದನ್ನು ಆರಂಭಿಸುವ ಮೊದಲೇ ಮರುಪರೀಕ್ಷೆಗೆ ಆದೇಶ ನೀಡಿರುವುದು ದೊಡ್ಡ ದುರಂತ. ಕಳೆದ 4-5 ವರ್ಷಗಳಿಂದ ಕಷ್ಟಪಟ್ಟು ತಯಾರಿ ನಡೆಸಿ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನಮ್ಮಲ್ಲಿ ಕೆಲ ಯುವತಿಯರು ಪರೀಕ್ಷೆಯ ತಯಾರಿಗಾಗಿ ಮದುವೆಯನ್ನೂ ಮುಂದೂಡಿದ್ದಾರೆ. ಕೆಲವರು ಮನೆಯಲ್ಲಿ ವಯಸ್ಕ ತಂದೆ ತಾಯಿಗಳ ಚಿಕಿತ್ಸೆ ಮುಂದೂಡಿದ್ದಾರೆ ಎಂದು ಧರಣಿಗೆ ಕೂತಿರುವವರು ಹೇಳುತ್ತಿದ್ದಾರೆ.

ಇವರ ನೋವು ಮತ್ತು ಬೇಗುದಿಯನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ. ಬಂಧು ಬಳಗದವರು, ಸ್ನೇಹಿತರು ತಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇವರು ಕೂಡ ಪರೀಕ್ಷೆಯಲ್ಲಿ ದುರ್ವ್ಯವಹಾರ ನಡೆಸಿ ಪಾಸಾಗಿದ್ದಾರೆ ಅಂತಲೇ ಭಾವಿಸಿದ್ದಾರೆ. ಹಾಗಾಗಿ, ಸರ್ಕಾರ ನಮ್ಮ ಪ್ರಾಮಾಣಿಕತೆಯನ್ನು ಗಣನೆಗೆ ತೆಗೆದುಕೊಂಡು ನೇಮಕಾತಿ ಆದೇಶ ನೀಡಬೇಕು ಇಲ್ಲವೇ ಅಪ್ರಮಾಣಿಕರೆಂದು ಘೋಷಿಸಿ ಸೆರೆಮನೆಗೆ ಕಳಿಸಬೇಕು ಎಂದು ಇವರು ಹೇಳುತ್ತಾರೆ.

ಇವರು ಅಮರಣಾಂತ ಉಪವಾಸ ಮುಷ್ಕರಕ್ಕೆ ಕೂತಿದ್ದಾರೆ. ತಮ್ಮ ಬೇಡಿಕೆ ಈಡೇರದ ಹೊರತು ಮುಷ್ಕರ ನಿಲ್ಲಿಸೆವು ಅಂತ ಗಟ್ಟಿನಿರ್ಧಾರ ಮಾಡಿದ್ದಾರೆ. ಸರ್ಕಾರ ಬೇಗ ಒಂದು ನಿರ್ಣಯ ತೆಗೆದುಕೊಳ್ಳಬೇಕು.

ಇದನ್ನೂ ಓದಿ:   ಪಿಎಸ್‌ಐ ಮರುಪರೀಕ್ಷೆ: ಬಡತನದಲ್ಲಿ ಓದಿ ಪಾಸಾದ ಬಾಗಲಕೋಟೆಯ ಈ ಯುವತಿ ಕಷ್ಟ ಕೇಳೋರು ಯಾರು?