ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸೈನಿಕ: ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ; ಮುಂದೇನಾಯ್ತು?
ಎಲ್ಲ ಸಮಸ್ಯೆಗೂ ಆತ್ಮಹತ್ಯೆ ಒಂದೇ ದಾರಿ ಅಲ್ಲ. ಯಾವುದೋ ಉದ್ವೇಗ, ಸಿಟ್ಟಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಮಾಡುವುದಕ್ಕಿಂತ ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕೇ ಸಿಗುತ್ತದೆ. ಈ ಪ್ರಕರಣದಲ್ಲಿ ಓರ್ವ ಮಾಜಿ ಯೋಧ ಯಾವುದೋ ಉದ್ವೇಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನದಿಗೆ ಹಾರಿದ್ದಾರೆ. ನದಿಯಲ್ಲಿ ಮನಸ್ಸು ಪರಿವರ್ತನೆಯಾಗಿ ಬದುಕಬೇಕು ಎಂಬ ಆಸೆ ಹುಟ್ಟಿದೆ. ಮುಂದೆ ಏನಾಯ್ತು? ಇಲ್ಲಿದೆ ವಿವರ
ಚಾಮರಾಜನಗರ, ಆಗಸ್ಟ್ 18: ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನದಿಗೆ ಹಾರಿದ್ದ ಮಾಜಿ ಸೈನಿಕನಿಗೆ (Ex soldier) ಕೊನೆ ಕ್ಷಣದಲ್ಲಿ ಬದುಕಬೇಕೆಂದು ಆಸೆ ಹುಟ್ಟಿದ್ದು, ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಹೌದು, ಚಾಮರಾಜನಗರ (Chamrajnagar) ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಜಿ ಸೈನಿಕ ಬೃಂಗೇಶ್ ಸಾಲಬಾಧೆ ತಾಳಲಾರದೆ ಸತ್ತೇಗಾಲ ಬಳಿ ಕಾವೇರಿ ನದಿಗೆ ಹಾರಿದ್ದರು.
ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ಮಾಜಿ ಸೈನಿಕ ಬೃಂಗೇಶ್ ಕೊಚ್ಚಿಕೊಂಡು ಹೋಗುತ್ತಿದ್ದರು. ಕೊನೆ ಕ್ಷಣದಲ್ಲಿ ಮನಸು ಬದಲಿಸಿ, ಬದುಕಬೇಕೆಂದು ಆಸೆ ಹುಟ್ಟಿದೆ. ಕೂಡಲೇ, ಮಾಜಿ ಸೈನಿಕ ಬೃಂಗೇಶ್ ಸನೀಹದಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾರೆ. ಬಳಿಕ, ಮಾಜಿ ಸೈನಿಕ ಬೃಂಗೇಶ್ ರಕ್ಷಣೆ ಮಾಡುವಂತೆ ಕಿರುಚಾಡಿದ್ದಾರೆ. ಆಗ, ಅಂಬಿಗರು ಮಾಜಿ ಸೈನಿಕ ಬೃಂಗೇಶ್ನನ್ನು ರಕ್ಷಣೆ ಮಾಡಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.