ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನವದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ನಲ್ಲಿದ್ದ ಭಾರತದ ಮೊದಲ ಗಗನಯಾತ್ರಿ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಸ್ವಾಗತಿಸಿದರು. ಭಾರತದ ಮಹತ್ವಾಕಾಂಕ್ಷೆಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಕೊಡುಗೆ ನೀಡುವ ಶುಕ್ಲಾ ಅವರ ಬಾಹ್ಯಾಕಾಶ ಕಾರ್ಯಾಚರಣೆಯ ಅಮೂಲ್ಯ ಒಳನೋಟಗಳನ್ನು ಹಂಚಿಕೊಂಡಿದ್ದರಿಂದ ಈ ಸಭೆ ಮಹತ್ವದ ಕ್ಷಣವಾಗಿತ್ತು.
ನವದೆಹಲಿ, ಆಗಸ್ಟ್ 18: ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ತಮ್ಮೊಂದಿಗೆ ಬಾಹ್ಯಾಕಾಶಕ್ಕೆ ಕೊಂಡೊಯ್ದ ತ್ರಿವರ್ಣ ಧ್ವಜವನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು. ಬಾಹ್ಯಾಕಾಶ ಹಾರಾಟದ ಸಿದ್ಧತೆಗಳ ಸಮಯದಲ್ಲಿ ಪ್ರಧಾನಿ ಮೋದಿ (PM Narendra Modi) ಶುಭಾಂಶು ಶುಕ್ಲಾ ಅವರಿಗೆ ತಮ್ಮ ತರಬೇತಿಯ ಸಂಪೂರ್ಣ ಮಾಹಿತಿಯನ್ನು ದಾಖಲಿಸಲು ಮತ್ತು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಾಗಿನ ಅನುಭವಗಳನ್ನು ಬರೆಯಲು ಸೂಚಿಸಿದ್ದರು. ಇದು ಭಾರತದ ಮೊದಲ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮವಾದ ಗಗನಯಾನಕ್ಕೆ ಕೈಪಿಡಿಯಾಗಲಿದೆ.
ಭಾರತದ ಹೆಮ್ಮೆಯ ಪುತ್ರನಾದ ಶುಭಾಂಶು ಶುಕ್ಲಾ ಅವರನ್ನು ಪ್ರಧಾನಿ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಅಪ್ಪಿಕೊಂಡು ಸ್ವಾಗತಿಸಿದರು. ಈ ವೇಳೆ ಗಗನಯಾತ್ರಿ ಶುಕ್ಲಾ ಪ್ರಧಾನಿ ಮೋದಿಗೆ ಆಕ್ಸಿಯಮ್ -4 ಮಿಷನ್ ಪ್ಯಾಚ್ ಅನ್ನು ಸಹ ನೀಡಿದರು. ಹಾಗೇ, ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿಯಲಾದ ಭೂಮಿಯ ವಿಸ್ಮಯಕಾರಿ ಫೋಟೋಗಳನ್ನು ಹಂಚಿಕೊಂಡರು. ಆಕ್ಸಿಯಮ್ -4 ಕಾರ್ಯಾಚರಣೆಯಲ್ಲಿ ಶುಭಾಂಶು ಶುಕ್ಲಾ ಅವರ ಭಾಗವಹಿಸುವಿಕೆ ಭಾರತಕ್ಕೆ ಒಂದು ಮೈಲಿಗಲ್ಲು. ಜೂನ್ 25ರಂದು ಫ್ಲೋರಿಡಾದಿಂದ ಉಡಾವಣೆಯಾದ ನಂತರ ಈ ಮಿಷನ್ ಜೂನ್ 26ರಂದು ISS ತಲುಪಿತು. ಶುಭಾಂಶು ಶುಕ್ಲಾ ಜುಲೈ 15ರಂದು ಭೂಮಿಗೆ ಮರಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

