ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ: ಒಂದು ಹೊತ್ತು ಊಟಕ್ಕೂ ಕಷ್ಟ ಪಡುತ್ತಿರುವ ಕಾಡಿನ ಮಕ್ಕಳು!

Edited By:

Updated on: Sep 27, 2026 | 1:30 PM

ಚಾಮರಾಜನಗರ ಜಿಲ್ಲೆಯ ಆದಿವಾಸಿ ಸೋಲಿಗರು ಮತ್ತು ಇತರೆ ಬುಡಕಟ್ಟು ಸಮುದಾಯಗಳು ಕಳೆದ ಆರು ತಿಂಗಳಿಂದ ಸರ್ಕಾರದಿಂದ ದೊರೆಯುತ್ತಿದ್ದ ಆಹಾರ ಕಿಟ್‌ಗಳಿಂದ ವಂಚಿತರಾಗಿದ್ದಾರೆ. ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಈ ಕಿಟ್‌ಗಳ ವಿತರಣೆ ಸ್ಥಗಿತಗೊಂಡಿದ್ದು, ಕಾಡಿನ ಮಕ್ಕಳು ಒಂದೊತ್ತು ಊಟಕ್ಕೂ ಪರದಾಡುವಂತಾಗಿದೆ. ಇದು ಅವರ ಆರೋಗ್ಯ ಮತ್ತು ಪೌಷ್ಟಿಕಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಚಾಮರಾಜನಗರ, ಸೆಪ್ಟೆಂಬರ್ 27: ಚಾಮರಾಜನಗರ, ಕರ್ನಾಟಕದಲ್ಲಿ ಅತಿ ಹೆಚ್ಚು ಆದಿವಾಸಿ ಸೋಲಿಗರು ವಾಸಿಸುವ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಸಾವಿರಾರು ಬುಡಕಟ್ಟು ಸಮುದಾಯದ ಜನರು ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರ ಒದಗಿಸುತ್ತಿದ್ದ ಆಹಾರ ಕಿಟ್‌ಗಳಿಂದ ವಂಚಿತರಾಗಿದ್ದಾರೆ. ಟ್ರೈಬಲ್ ವೆಲ್ಫೇರ್ ಇಲಾಖೆಯು ಪ್ರತಿ ತಿಂಗಳು ಸುಮಾರು 8,152 ಪೌಷ್ಟಿಕಾಂಶಯುಕ್ತ ಆಹಾರ ಕಿಟ್‌ಗಳನ್ನು ಈ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸುತ್ತಿತ್ತು.

ಈ ಕಿಟ್‌ಗಳಲ್ಲಿ ಮೊಟ್ಟೆ, ರಾಗಿ, ತೊಗರಿಬೇಳೆ, ಹೆಸರುಬೇಳೆ, ಕಡಲೆಕಾಳು, ತುಪ್ಪ ಸೇರಿದಂತೆ ಹಲವಾರು ಪೌಷ್ಟಿಕ ಆಹಾರ ಪದಾರ್ಥಗಳಿದ್ದವು. ಕೂಲಿ-ನಾಲಿ ಮಾಡುವ ಅವಕಾಶವಿಲ್ಲದ, ದುರ್ಗಮ ಕಾಡಿನ ಪ್ರದೇಶಗಳಲ್ಲಿ ವಾಸಿಸುವ ಆದಿವಾಸಿಗಳಿಗೆ ಈ ಕಿಟ್‌ಗಳು ಪ್ರಮುಖ ಆಧಾರವಾಗಿದ್ದವು. ಆದರೆ, ಕಳೆದ ಆರು ತಿಂಗಳಿಂದ ಹೊಸ ಟೆಂಡರ್ ಪ್ರಕ್ರಿಯೆ ಆಗದ ಕಾರಣ ಕಿಟ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರಿಂದಾಗಿ ಚಾಮರಾಜನಗರದ ಸೋಲಿಗರು ಮತ್ತು ಜೇನುಕುರುಬರು ಸೇರಿದಂತೆ ಬುಡಕಟ್ಟು ಮಕ್ಕಳು ಮತ್ತು ಕುಟುಂಬಗಳು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಗಮನಹರಿಸಿ, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಆದಿವಾಸಿಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸುವಂತೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More