ಗಾಳಿಯಲ್ಲಿ ಹಾರಿ ಮಿಂಚಿನ ಕ್ಯಾಚ್: ಗ್ಲೆನ್ ಫಿಲಿಪ್ಸ್ ಫೀಲ್ಡಿಂಗ್ಗೆ ದಂಗಾದ ಪ್ರೇಕ್ಷಕರು
Champions Trophy 2025: ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ಪಡೆ 320 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ಕೇವಲ 260 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ 60 ರನ್ಗಳ ಜಯ ಸಾಧಿಸಿದೆ.
ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ನ್ಯೂಝಿಲೆಂಡ್ ಆಟಗಾರ ಗ್ಲೆನ್ ಫಿಲಿಪ್ಸ್ ಪರಾಕ್ರಮ ಮೆರೆದಿದ್ದಾರೆ. ಅದು ಸಹ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂಲಕ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ನ್ಯೂಝಿಲೆಂಡ್ ಪರ ವಿಲ್ ಯಂಗ್ (107), ಟಾಮ್ ಲ್ಯಾಥಮ್ (118) ಶತಕ ಸಿಡಿಸಿದ್ದರು. ಆ ಬಳಿಕ ಬಂದ ಗ್ಲೆನ್ ಫಿಲಿಪ್ಸ್ ಕೇವಲ 39 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 61 ರನ್ ಚಚ್ಚಿದರು. ಈ ಮೂಲಕ ಕಿವೀಸ್ ಪಡೆ 50 ಓವರ್ಗಳಲ್ಲಿ 320 ರನ್ ಕಲೆಹಾಕಿತು.
321 ರನ್ಗಳ ಗುರಿ ಪಡೆದ ಪಾಕಿಸ್ತಾನ್ ತಂಡವು 8 ರನ್ಗಳಿಸುವಷ್ಟರಲ್ಲಿ ಸೌದ್ ಶಕೀಲ್ (6) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಮೊಹಮ್ಮದ್ ರಿಝ್ವಾನ್ ಕೇವಲ 3 ರನ್ಗಳಿಸಿ ಔಟಾದರು. ಹೀಗೆ ಔಟಾಗಲು ಮುಖ್ಯ ಕಾರಣ ಗ್ಲೆನ್ ಫಿಲಿಪ್ಸ್.
ವಿಲಿಯಂ ಒರೋಕ್ ಎಸೆದ 10ನೇ ಓವರ್ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ರಿಝ್ವಾನ್ ಬ್ಯಾಕ್‌ವರ್ಡ್ ಪಾಯಿಂಟ್ನತ್ತ ಬಾರಿಸಿದ್ದರು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿದ್ದ ಗ್ಲೆನ್ ಫಿಲಿಪ್ಸ್ ಗಾಳಿಯಲ್ಲೇ ಹಾರಿ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು. ಇದೀಗ ಈ ಅದ್ಭುತ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ನ್ಯೂಝಿಲೆಂಡ್ ನೀಡಿದ 321 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡವು 47.2 ಓವರ್ಗಳಲ್ಲಿ 260 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಝಿಲೆಂಡ್ 60 ರನ್ಗಳ ಭರ್ಜರಿ ಜಯ ಸಾಧಿಸಿದೆ.