ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ, ಪೇದೆ ನಡುವೆ ಜಂಗಿ ಕುಸ್ತಿ
ಅವರಿಬ್ಬರೂ ಸರ್ಕಾರಿ ನೌಕರರು. ಸರ್ಕಾರಿ ನೌಕರರು ಸಾರ್ವಜನಿಕರಿಗೆ ಮಾದರಿಯಾಗಬೇಕಾದವರು. ಆದರೆ ಪರಸ್ಪರ ಸಾರ್ವಜನಿಕ ಸ್ಥಳದಲ್ಲಿ ಬಡಿದಾಡಿಕೊಂಡಿದ್ದಾರೆ. ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ ಮತ್ತು ಪೊಲೀಸ್ ಪೇದೆ ಜಂಗಿ ಕುಸ್ತಿ ಆಡಿದ್ದಾರೆ.
ಚಾಮರಾಜನಗರ, ಮೇ 31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ನಿರ್ವಾಹಕ (Conductor) ಮತ್ತು ಪೊಲೀಸ್ ಪೇದೆ (Constable) ನಡುವೆ ಗಲಾಟೆ ನಡೆದಿದ್ದು, ಬಸ್ ನಿಲ್ದಾಣದಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಪರಸ್ಪರ ಬಡಿದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಕೆಎಸ್ಆರ್ಟಿಸಿ ಬಸ್ ಹಿಮವದ್ ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆಗೆ ಬರುತ್ತಿತ್ತು. ಈ ಬಸ್ನಲ್ಲಿ ಮೈಸೂರಿನ ಪೊಲೀಸ್ ಪೇದೆ ಕೊಟ್ರೇಶ್ ಐನಾಳ್ ಅವರು ಪ್ರಯಾಣಿಸಿದ್ದಾರೆ. ಬಸ್ನ ನಿರ್ವಾಹಕ ಲೋಕೇಶ್ ಅವರು ಪೊಲೀಸ್ ಪೇದೆ ಕೊಟ್ರೇಶ್ ಐನಾಳ್ ಅವರಿಗೆ ಗೊತ್ತಿಲ್ಲದೆ ಎರಡು ಬಾರಿ ಟಿಕೆಟ್ ನೀಡಿದ್ದಾರೆ. ಇದನ್ನು ಪೊಲೀಸ್ ಪೇದೆ ಕೊಟ್ರೇಶ್ ಐನಾಳ್ ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ತಾರಕಕ್ಕೆ ಏರಿದೆ. ಬಳಿಕ ಇಬ್ಬರೂ ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆ (Gundlupete) ಬಸ್ ನಿಲ್ದಾಣದಲ್ಲಿ ಕೈ ಕೈ ಮಿಲಾಯಿಸಿದ್ದು, ಜಂಗಿ ಕುಸ್ತಿಯಾಡಿದ್ದಾರೆ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು, ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ