ಹೆಲ್ಮೆಟ್ ಹಾಕಿಕೊಂಡು ಬಂದು ಬರ್ಬರ ಹತ್ಯೆ: ಬಾರ್ ಬಳಿ ನಾಗರಾಜ್ ಎಂಬ ವ್ಯಕ್ತಿಗೆ ಡ್ರ್ಯಾಗರ್‌ನಿಂದ ಇರಿದು ಕೊಲೆ
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಪಲ್ಲಿ ಗ್ರಾಮದಲ್ಲಿ ನಾಗರಾಜ್ ಎಂಬ ವ್ಯಕ್ತಿಯನ್ನು ಮದ್ಯಪಾನ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯ ನಂತರ ಆರೋಪಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದು, ಹಳೆ ದ್ವೇಷ, ಆರ್ಥಿಕ ಅಥವಾ ಇತರೆ ಕಾರಣಗಳಿಗಾಗಿ ಕೊಲೆ ನಡೆದಿರಬಹುದೆಂದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ, ಸೆ.5: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಘಂಟಂವಾರಪಲ್ಲಿ ಗ್ರಾಮದ ಜೆಕೆಎನ್ ಎಂಟರ್‌ಪ್ರೈಸಸ್ ಬಾರ್ ಬಳಿ ಮದ್ಯಪಾನ ಮಾಡುತ್ತಿದ್ದ ನಾಗರಾಜ್ ಎಂಬ ವ್ಯಕ್ತಿಯನ್ನು ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಯೊಬ್ಬ ಡ್ರ್ಯಾಗರ್‌ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಾಗೇಪಲ್ಲಿಯ ಉಗ್ರಣಂಪಲ್ಲಿ ನಿವಾಸಿಯಾಗಿದ್ದ ನಾಗರಾಜ್, ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಮೊದಲು ನಾಗರಾಜ್ ಕತ್ತಿನ ಹಿಂಭಾಗಕ್ಕೆ ಡ್ರ್ಯಾಗರ್‌ನಿಂದ ಇರಿದು, ನಂತರ ಕೆನ್ನೆಗೆ ಮತ್ತು ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ನಾಗರಾಜ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಾಗರಾಜ್ ಅವರನ್ನು ರಕ್ಷಿಸಲು ಸ್ನೇಹಿತರು ಯತ್ನಿಸಿದರೂ, ಆರೋಪಿ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಕೊಲೆಗೆ ಹಳೆ ದ್ವೇಷ, ಆರ್ಥಿಕ ವ್ಯವಹಾರ, ಅನೈತಿಕ ಸಂಬಂಧ ಅಥವಾ ಆಸ್ತಿ ವಿವಾದ ಕಾರಣವಾಗಿರಬಹುದೆಂದು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ತನಿಖೆಗೆ ನಿರ್ದೇಶನ ನೀಡಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
