ಟಿವಿ9 ವರದಿ ಬೆನ್ನಲ್ಲೇ ಡಿಡಿಪಿಐ ಮಂಜುನಾಥ್ ಕ್ರಮ: ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ ಸಿಬ್ಬಂದಿಗೆ ನೋಟಿಸ್
ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ನಡೆದ ಎಣ್ಣೆ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ ಮಂಜುನಾಥ್ ಐವರು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಟಿವಿ9 ವರದಿಯ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಅಧೀಕ್ಷಕ ಸುನಿಲ್, ಕ್ಲರ್ಕ್‌ಗಳಾದ ಗಣೇಶ್, ಸ್ವಾಮಿ, ವಾಹನ ಚಾಲಕ ರವಿ ಮತ್ತು ಡಿ ದರ್ಜೆ ನೌಕರ ತಿಪ್ಪೇಸ್ವಾಮಿ ಅವರಿಗೆ ಕರ್ತವ್ಯ ಲೋಪದ ಆರೋಪದ ಮೇಲೆ ನೋಟಿಸ್ ನೀಡಲಾಗಿದೆ.
ಚಿತ್ರದುರ್ಗ, ಅ.15: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ( liquor party office) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಿಡಿಪಿಐ ಮಂಜುನಾಥ್ ಅವರು ಐವರು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಟಿವಿ9 ಕನ್ನಡದಲ್ಲಿ ಈ ಕುರಿತು ವರದಿ ಪ್ರಸಾರ ಮಾಡಿದ ಬೆನ್ನಲ್ಲೇ, ಡಿಡಿಪಿಐ ಮಂಜುನಾಥ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಕಚೇರಿಯಲ್ಲೇ ಮೋಜು ಮಸ್ತಿ ಮಾಡುತ್ತಾ ಎಣ್ಣೆ ಪಾರ್ಟಿ ನಡೆಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಿಬ್ಬಂದಿಯೊಬ್ಬರು ಹೊಸ ಕಾರು ಖರೀದಿಸಿದ ಖುಷಿಗೆ ಕಚೇರಿಯ ಆವರಣದಲ್ಲೇ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗಿಯಾಗಿದ್ದ ಅಧೀಕ್ಷಕ ಸುನಿಲ್, ಕ್ಲರ್ಕ್‌ಗಳಾದ ಗಣೇಶ್ ಮತ್ತು ಸ್ವಾಮಿ, ವಾಹನ ಚಾಲಕ ರವಿ ಹಾಗೂ ಡಿ ದರ್ಜೆ ನೌಕರ ತಿಪ್ಪೇಸ್ವಾಮಿ ಅವರಿಗೆ ನೋಟಿಸ್ ನೀಡಲಾಗಿದೆ. ಕಚೇರಿಯ ಆವರಣದಲ್ಲಿ ಎಣ್ಣೆ ಪಾರ್ಟಿ ನಡೆಸಿರುವುದು ಕರ್ತವ್ಯ ಲೋಪ ಎಂದು ಪರಿಗಣಿಸಿ, ಅವರ ವಿರುದ್ಧ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂದು ಡಿಡಿಪಿಐ ಮಂಜುನಾಥ್ ತಮ್ಮ ನೋಟಿಸ್‌ನಲ್ಲಿ ಪ್ರಶ್ನಿಸಿದ್ದಾರೆ. ಟಿವಿ9 ಮಾಡಿದ ವರದಿಗಳ ಮೂಲಕ ಘಟನೆ ಬೆಳಕಿಗೆ ಬಂದ ತಕ್ಷಣವೇ ಈ ಕ್ರಮ ಕೈಗೊಂಡಿರುವುದಾಗಿ ಡಿಡಿಪಿಐ ಮಂಜುನಾಥ್ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
