ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಭರದ ಸಿದ್ಧತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಬಾರಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ಕಾವೇರಿ ನಿವಾಸದಲ್ಲಿ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ. ಇಲಾಖಾವಾರು ಸಭೆ ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಎರಡನೇ ಬಾರಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಸೋಮವಾರ ಬದಾಮಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
ಬೆಂಗಳೂರು, ಜನವರಿ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಬಜೆಟ್ ಮಂಡನೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಅವರು ಬಜೆಟ್ ಪೂರ್ವಭಾವಿ ಸಭೆಗಳನ್ನು ಇಂದಿನಿಂದ (ಜನವರಿ 20) ಆರಂಭಿಸಲಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆಯಲಿರುವ ಈ ಸಭೆಗಳಲ್ಲಿ ಇಲಾಖಾವಾರು ಪರಿಶೀಲನೆ ನಡೆಯಲಿದ್ದು, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ದೀರ್ಘಾವಧಿಯ ಸಿಎಂ ಆಗಿ ಸೇವೆ ಸಲ್ಲಿಸಿದ ದಾಖಲೆ ಬರೆದಿದ್ದಾರೆ. ದೇವರಾಜ ಅರಸು ಅವರ ದಾಖಲೆಯನ್ನೂ ಮುರಿದಿದ್ದಾರೆ. ಇದರೊಂದಿಗೆ ಸತತ 16ನೇ ಬಾರಿಗೆ ಅವರು ಬಜೆಟ್ ಮಂಡಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಒಂದೆಡೆ ಬಜೆಟ್ ಸಿದ್ಧತೆಯಲ್ಲಿರುವ ಸಿಎಂ, ಮತ್ತೊಂದೆಡೆ ಬದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಇದು ಅವರ ಮೊದಲ ದೇಗುಲ ಭೇಟಿಯಾಗಿದೆ. ಸಿಎಂಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವೆಂದೇ ಪರಿಗಣಿಸಲಾಗಿರುವ ಈ ದೇವಾಲಯಕ್ಕೆ ಭೇಟಿ ನೀಡಿ ಹಣೆಗೆ ಕುಂಕುಮ ಹಚ್ಚಿಕೊಂಡು, ದೇವರ ಬಳಿ ಪ್ರಾರ್ಥನೆ ಮಾಡಿದ್ದಾರೆ.
