ಎಲ್ಲ 28 ಸ್ಥಾನ ಗೆಲ್ಲುವೆನೆನ್ನುವ ವಿಜಯೇಂದ್ರ ಕಾಂಗ್ರೆಸ್ ಒಂದು ಸ್ಥಾನ ಗೆದ್ದರೆ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವರೇ? ಬೇಳೂರು ಗೋಪಾಲಕೃಷ್ಣ
ಖುದ್ದು ಅವರ ಪಕ್ಷದವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿಜಯೇಂದ್ರ ಮತ್ತು ಅವರ ತಂದೆಯ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಆದರೆ ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರ ಮಂಪರು ಪರೀಕ್ಷೆ ಮಾಡಿಸಬೇಕು ಅನ್ನುತ್ತಾರೆ ಎಂದು ಬೇಳೂರು ಹೇಳಿದರು.
ಶಿವಮೊಗ್ಗ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮೇಲೆ ಹರಿಹಾಯ್ದರು. ಅಪ್ಪನ ಹೆಸರಲ್ಲಿ ಪಕ್ಷದ ಅಧ್ಯಕ್ಷನಾಗಿರುವ ವಿಜಯೇಂದ್ರರ ಹಾರಾಟ ಹೆಚ್ಚುತ್ತಿದೆ, ರಾಜ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಇತಿಹಾಸ ನಿರ್ಮಿಸುವುದಾಗಿ ಅವರು ಹೇಳುತ್ತಾರೆ ಎಂದ ಗೋಪಾಲಕೃಷ್ಣ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Lok Sabha polls) ವಿಜಯೇಂದ್ರ ಎಲ್ಲ 28 ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರಂತೆ, ಕಾಂಗ್ರೆಸ್ ಒಂದೂ ಬಿಡೋದಿಲ್ಲವಂತೆ, ಹಾಗಾದರೆ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಎಂದು ಪ್ರಶ್ನಿಸಿದರು. ಖುದ್ದು ಅವರ ಪಕ್ಷದವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಮತ್ತು ಅವರ ತಂದೆಯ ವಿರುದ್ಧ ಭಾರೀ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಆದರೆ, ವಿಜಯೇಂದ್ರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರ ಮಂಪರು ಪರೀಕ್ಷೆ ಮಾಡಿಸಬೇಕು ಅನ್ನುತ್ತಾರೆ. ಸರಿ, ಕಾಂಗ್ರೆಸ್ ಮಂಪರು ಪರೀಕ್ಷೆಗೆ ತಯಾರಿದೆ, ಆದರೆ ವಿಜಯೇಂದ್ರ ಸಹ ಯತ್ನಾಳ್ ಮಾಡಿರುವ ಪಿಎಸ್ ಐ ಅಕ್ರಮ ಹಗರಣ ಮತ್ತು ಕೋವಿಡ್ ಸಮಯದ 40,000 ಕೋಟಿ ರೂ. ಭ್ರಷ್ಟಾಚಾರದ ಆರೋಪದಲ್ಲಿ ಮಂಪರು ಪರೀಕ್ಷೆಗೊಳಗಾಗುತ್ತಾರೆಯೇ? ಎಂದು ಗೋಪಾಲಕೃಷ್ಣ ಸವಾಲೆಸೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ