ಜನ ಅಧಿಕಾರ ಕೊಡದಿದ್ದರೂ ಚಿಂತೆಯಿಲ್ಲ, ಕಾಂಗ್ರೆಸ್ ಸೆಕ್ಯುಲರಿಸಂ ಪರಿಪಾಲನೆ ಮಾಡುತ್ತದೆ: ಲಕ್ಷ್ಮಣ್, ಕಾಂಗ್ರೆಸ್ ವಕ್ತಾರ

ನಾವು ಯಾವ ವಾದವನ್ನೂ ಪ್ರತಿಪಾದಿಸುವುದಿಲ್ಲ. ನಮಗೆ ಜನ ಅಧಿಕಾರ ನೀಡಲಿ ಅಥವಾ ನೀಡದಿರಲಿ, ಸೆಕ್ಯುಲರಿಸಮ್ ಅನ್ನು ಪರಿಪಾಲನೆ ಮಾಡಿಕೊಂಡು ಬಂದಿದ್ದೇವೆ ಮತ್ತು ಮುಂದೆಯೂ ಅದನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.

TV9kannada Web Team

| Edited By: Arun Belly

Apr 04, 2022 | 5:15 PM

ಮೈಸೂರು: ರಾಜ್ಯದಲ್ಲಿ, ದೇಶದಲ್ಲಿ ಜನ ಉದ್ಯೋಗಗಳಿಲ್ಲದೆ ಸಾಯ್ತಾ ಇದ್ದಾರೆ, ಕೆಲಸ ಮಾಡುತ್ತಿರುವವರು ಸಹ ಅದನ್ನು ಕಳೆದುಕೊಳ್ಳುತ್ತಿದ್ದಾರೆ, ಬಿಜೆಪಿ ನಾಯಕರಿಗೆ ಈ ಜ್ವಲಂತ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ನಿರುದ್ಯೋಗಿಗಳಿಗೆ (unemployed) ಉದ್ಯೋಗ ಸೃಷ್ಟಿಸುವ ಬದಲು ಅವರು ನಿಷ್ಪ್ರಯೋಜಕ ಸಂಗತಿಗಳ ಬಗ್ಗೆ ಮಾತಾಡುತ್ತಾ ಸಮಯ ಕಳೆಯುತ್ತಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಎಮ್ ಲಕ್ಷಣ್ (M Laxman) ಮೈಸೂರಲ್ಲಿ (Mysuru) ಸೋಮವಾರ ಹೇಳಿದರು. ಅವರು ಯಾವತ್ತೂ ಜನರ ಪರವಾಗಿ ಮಾತಾಡಲ್ಲ, ಜನರ ನಡುವೆ ಕಿಡಿ ಹೊತ್ತಿಸುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ. ಬೇರೆಯವರ ರಕ್ತ ಕುಡಿದು ಆಧಿಕಾರ ನಡೆಸಬೇಕೆನ್ನುವವರಿಗೆ ರೈತರ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲ. ರಾಜ್ಯ ಮತ್ತು ಇಡೀ ದೇಶದ ಜನತೆ ಇದನ್ನು ಅರ್ಥಮಾಡಿಕೊಳ್ಳಬೇಕು, ಎಂದು ಲಕ್ಷ್ಮಣ್ ಹೇಳಿದರು.

ಯಾವುದಾದರೂ ವಿವಾದಕ್ಕೆ ಕಾಂಗ್ರೆಸ್ ರಿಯಾಕ್ಟ್ ಮಾಡಿದ ಕೂಡಲೇ ಸಾಫ್ಟ್ ಹಿಂದುತ್ವ ಪ್ರತಿಪಾದಿಸುತ್ತಿದ್ದಾರೆ ಅಂತ ಬಿಜೆಪಿ ನಾಯಕರು ಹೇಳುತ್ತಾರೆ. ನಾವು ಯಾವ ವಾದವನ್ನೂ ಪ್ರತಿಪಾದಿಸುವುದಿಲ್ಲ. ನಮಗೆ ಜನ ಅಧಿಕಾರ ನೀಡಲಿ ಅಥವಾ ನೀಡದಿರಲಿ, ಸೆಕ್ಯುಲರಿಸಮ್ ಅನ್ನು ಪರಿಪಾಲನೆ ಮಾಡಿಕೊಂಡು ಬಂದಿದ್ದೇವೆ ಮತ್ತು ಮುಂದೆಯೂ ಅದನ್ನು ಪಾಲಿಸಿಕೊಂಡು ಹೋಗುತ್ತೇವೆ ಎಂದು ಲಕ್ಷ್ಮಣ್ ಹೇಳಿದರು.

ಅಜಾನ್ ಬಗ್ಗೆ ಮಾತಾಡಿದ ಲಕ್ಷ್ಮಣ್ ಅವರು, ಇದಕ್ಕೆ ಸಂಬಂಧಿಸಿ ಪ್ರಕರಣ ಹೈಕೋರ್ಟ್ ನಲ್ಲಿದೆ, ತೀರ್ಪು ಇನ್ನೂ ಹೊರಬಿದ್ದಿಲ್ಲ. ನಾವು ಬೆಳಗ್ಗೆ ನಾಲ್ಕು ಗಂಟೆಯಿಂದ ದೇವಸ್ಥಾನಗಳಲ್ಲಿ ಸುಪ್ರಭಾತವನ್ನು ನುಡಿಸುತ್ತೇವೆ, ಅವರು 5-5:30ರ ಹೊತ್ತಿಗೆ ಸುಮಾರು 30 ಸೆಕೆಂಡುಗಳ ಕಾಲ ಅಜಾನ್ ನೀಡುತ್ತಾರೆ, ಇದು ಶತಮಾನಗಳಿಂದ ನಡೆದುಕೊಂಡು ಬಂದಿದೆ, ಅದರಲ್ಲಿ ತಪ್ಪೇನಿದೆ? ಎಂದು ಲಕ್ಷ್ಮಣ್ ಕೇಳುತ್ತಾರೆ.

ಅಜಾನ್ ಬಗ್ಗೆ ಇದುವರೆಗೆ ಯಾರಿಗೂ ತೊಂದರೆ ಆಗಿಲ್ಲ, ಅವರ ಪಾಲಿಗೆ ಅವರು ಮಾಡಿಕೊಳ್ಳುತ್ತಾರೆ ನಮ್ಮ ಪಾಲಿಗೆ ನಾವು ಎಂದ ಅವರು ಬೆಳಗಿನ ಜಾವ ಎಲ್ಲ ಬೀದಿಗಳಲ್ಲಿ ನಾಯಿಗಳು ಬೊಗಳುತ್ತವೆ, ಹಾಗಂತ ಅವರು ನಾಯಿಗಳನ್ನು ಕೊಲ್ಲುತ್ತಾರೆಯೇ ಅಂತ ಕೇಳಿದರು.

ಪ್ರಶಾಂತ್ ಸಂಬರಗಿ ಮತ್ತು ಪ್ರಮೋದ್ ಮುತಾಲಿಕ್ ರಂಥ ಜನ ರಾಜ್ಯದ ಎಲ್ಲ ಹಿಂದೂಗಳ ಗುತ್ತಿಗೆದಾರರೇ? ಎಂದು ಲಕ್ಷ್ಮಣ್ ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:  ಡಿಕೆ ಶಿವಕುಮಾರ್, ಡಿಕೆ ಸುರೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪ; ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್ ದಾಖಲು

Follow us on

Click on your DTH Provider to Add TV9 Kannada