ಕೆಬಿಸಿಯಲ್ಲಿ ಪಾಲ್ಗೊಳ್ಳದೆ ಕರೋಡ್ಪತಿಗಳಾದ ಇಬ್ಬರು ಶಾಲಾ ಬಾಲಕರ ಕತೆ ಇದು! ಬಿಹಾರಿನ ಕಠೀಹಾರ್ನಲ್ಲಿ ನಡೆದ ಘಟನೆ!!
ಆಶಿಷ್ ಹೆಸರಿನ 6 ನೇ ಕ್ಲಾಸ್ ವಿದ್ಯಾರ್ಥಿಯ ಅಕೌಂಟ್ಗೆ ರೂ. 6.2 ಕೋಟಿ ಜಮಾ ಆಗಿದ್ದರೆ ಅವನ ಕ್ಲಾಸ್ಮೇಟ್ ಗುರು ಚರಣ್ ವಿಶ್ವಾಸ್ ಖಾತೆಯಲ್ಲಿ ರೂ. 900 ಕೋಟಿಗಿಂತಲೂ ಹೆಚ್ಚು ಹಣ ಜಮಾ ಆಗಿದೆ.
ರಾತ್ರೋರಾತ್ರಿ ನಿಮ್ಮ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ಜಮಾ ಆದರೆ ನೀವೇನು ಮಾಡುತ್ತೀರಿ? ಹೇ ಸುಮ್ನಿರಿ ಸಾರ್, ತಮಾಷೆ ಮಾಡ್ಬೇಡಿ ಅಂತಿದ್ದೀರಿ ತಾನೆ? ಆದರೆ ಇಂಥದೊಂದು ತಮಾಷೆ ಬಿಹಾರಿನ ಕಠಿಹಾರ್ನಲ್ಲಿ ನಡೆದಿದೆ ಮಾರಾಯ್ರೇ! ಶಾಲಾ ಸಮವಸ್ತ್ರಕ್ಕಾಗಿ ರಾಜ್ಯ ಸರ್ಕಾರದಿಂದ ಕೆಲವು ನೂರುಗಳಷ್ಟು ಹಣದ ನಿರೀಕ್ಷೆಯಲ್ಲಿದ್ದ ಇಬ್ಬರು ಶಾಲಾ ಮಕ್ಕಳ ಬ್ಯಾಂಕ್ ಖಾತೆಗಳಲ್ಲಿ ನೂರಲ್ಲ, ಕೋಟಿ ಕೋಟಿ ರೂಪಾಯಿಗಳು ಜಮಾ ಆಗಿವೆ!! ವಿಷಯ ಗೊತ್ತಾಗುತ್ತಿದ್ದಂತೆ ಊರಿನ ಜನ ಬ್ಯಾಂಕಿನ ಮುಂದೆ ಘೇರಾಯಿಸಿಬಿಟ್ಟಿದ್ದಾರೆ. ತಮ್ಮ ಖಾತೆಯಲ್ಲೂ ಕೋಟಿಗಳು ಜಮಾ ಆಗಿವೆ ಅಂತ ಪರೀಕ್ಷಿಸಿಕೊಳ್ಳಲು ಬ್ಯಾಂಕ್ ಸಿಬ್ಬಂದಿಗೆ ತಮ್ಮ ಸ್ಟೇಟ್ಮೆಂಟ್ ತೋರಿಸಿ ಅಂತ ಮುಗಿ ಬಿದ್ದಿದ್ದಾರೆ. ನಮ್ಮ ಆದೃಷ್ಟವೂ ಖುಲಾಯಿಸಿರಬಹುದೇ ಎಂದು ತಿಳಿದುಕೊಳ್ಳುವ ತವಕ, ಧಾವಂತ ಅವರಿಗೆ.
ಈ ಇಬ್ಬರು ಶಾಲಾ ಬಾಲಕರ ಖಾತೆಗಳು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ನಲ್ಲಿವೆ. ಸರ್ಕಾರದ ಒಂದು ಯೋಜನೆ ಅನ್ವಯ ಅವರ ಖಾತೆಗೆ ಕೆಲ ನೂರರಷ್ಟು ಹಣ ಬರಬೇಕಿತ್ತು. ಹಾಗಾಗಿ, ಹಣ ಖಾತೆಗೆ ಜಮಾ ಆಗಿದೆಯಾ ಎನ್ನುವುದನ್ನು ತಿಳಿದುಕೊಳ್ಳಲು ಅವರಿಬ್ಬರು ತಮ್ಮ ಪಾಲಕರೊಂದಿಗೆ ಒಂದು ಖಾಸಗಿ ಇಂಟರ್ನೆಟ್ ಸೆಂಟರ್ಗೆ ಹೋಗಿದ್ದಾರೆ. ಅವರ ಖಾತೆಗಳಲ್ಲಿ ಬ್ಯಾಲೆನ್ಸ್ ಚೆಕ್ಮಾಡಿದಾಗ, ಇಂಟರ್ನೆಟ್ ಸೆಂಟರ್ನವ ಸೇರಿದಂತೆ, ಬಾಲಕರು ಮತ್ತವ ಪೋಷಕರಿಗೆ ದಿಗ್ಭಾಂತಿ!!
ಆಶಿಷ್ ಹೆಸರಿನ 6 ನೇ ಕ್ಲಾಸ್ ವಿದ್ಯಾರ್ಥಿಯ ಅಕೌಂಟ್ಗೆ ರೂ. 6.2 ಕೋಟಿ ಜಮಾ ಆಗಿದ್ದರೆ ಅವನ ಕ್ಲಾಸ್ಮೇಟ್ ಗುರು ಚರಣ್ ವಿಶ್ವಾಸ್ ಖಾತೆಯಲ್ಲಿ ರೂ. 900 ಕೋಟಿಗಿಂತಲೂ ಹೆಚ್ಚು ಹಣ ಜಮಾ ಆಗಿದೆ. ಕಠೀಹಾರ ಗ್ರಾಮದ ಮುಖಂಡ ಮತ್ತು ಬೇರೆ ಹಿರಿಯರು ಸದರಿ ವಿಷಯವನ್ನು ಖಚಿತಪಡಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಹಣ, ಎಲ್ಲಿಂದ ಬಂತೆಂದು ಬ್ಯಾಂಕ್ ತನಿಖೆ ನಡೆಸುತ್ತಿದೆ.
ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿರುವ ಕಠಿಹಾರ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ ಅವರು, ‘ಬುಧವಾರ ಸಾಯಂಕಾಲ ನನಗೆ ವಿಷಯದ ಬಗ್ಗೆ ಮಾಹಿತಿ ಸಿಕ್ಕಿದೆ. ನಾವು ಹಣದ ಮೂಲವನ್ನು ತನಿಖೆ ಮಾಡುತ್ತಿದ್ದೇವೆ. ಏನಾಗಿದೆ ಅಂತ ತಿಳಿದುಕೊಳ್ಳಲೆಂದೇ ನಾವು ಗುರುವಾರ ಬ್ಯಾಂಕನ್ನು ಬೇಗ ಓಪನ್ ಮಾಡಿದ್ದೇವೆ. ಕಂಪ್ಯೂಟರ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಎದುರಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ತಿಳಿಸಿದ್ದಾರೆ. ಶಾಲಾ ಬಾಲಕರ ಬ್ಯಾಂಕ್ ಸ್ಟೇಟ್ಮೆಂಟ್ ಗಳಲ್ಲಿ ಹಣವಿತ್ತೇ ಹೊರತು ಅವರ ಖಾತೆಗಳಲ್ಲಿ ಅದು ಜಮಾ ಆಗಿರುವುದು ಕಾಣುತ್ತಿಲ್ಲ. ಬ್ಯಾಂಕ್ ಸಿಬ್ಬಂದಿಗೆ ವರದಿ ಸಲ್ಲಿಸಲು ಹೇಳಿದ್ದೇನೆ,’ ಎಂದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ, ವಿಡಿಯೋ ವೈರಲ್