ಕೈ ನೋವು ಇದ್ದರೂ ದ್ವಾರಕೀಶ್​ಗೆ ಅಂತಿಮ ನಮನ ಸಲ್ಲಿಸಲು ಬಂದ ನಟ ದರ್ಶನ್​

ಕೈ ನೋವು ಇದ್ದರೂ ದ್ವಾರಕೀಶ್​ಗೆ ಅಂತಿಮ ನಮನ ಸಲ್ಲಿಸಲು ಬಂದ ನಟ ದರ್ಶನ್​

ಮದನ್​ ಕುಮಾರ್​
|

Updated on: Apr 16, 2024 | 6:20 PM

ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಬಳಿ ಇರುವ ನಿವಾಸದಲ್ಲಿ ನಟ ದ್ವಾರಕೀಶ್ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ. ನಟ ದರ್ಶನ್​ ಕೂಡ ಬಂದು ದ್ವಾರಕೀಶ್​ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೈ ನೋವಿನ ನಡುವೆಯೂ ಅವರು ಆಗಮಿಸಿದ್ದಾರೆ. ಕುಟುಂಬದವರಿಗೆ ದರ್ಶನ್​ ಸಾಂತ್ವನ ಹೇಳಿದ್ದಾರೆ.

ನಟ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ (Darshan) ಅವರಿಗೆ ಕೈ ಆಪರೇಷನ್​ ಆಗಿದೆ. ಕೈ ನೋವಿನಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನೋವಿನ ನಡುವೆಯೂ ಅವರು ಓಡೋಡಿ ಬಂದು ದ್ವಾರಕೀಶ್​ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಇಂದು (ಏಪ್ರಿಲ್​ 16) ಹೃದಯಾಘಾತದಿಂದ ದ್ವಾರಕೀಶ್​ ಅವರು ನಿಧನರಾದರು. ಕನ್ನಡ ಚಿತ್ರರಂಗಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಹಲವರಿಗೆ ಅವಕಾಶ ನೀಡಿದ್ದಾರೆ. ಅನೇಕ ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ದ್ವಾರಕೀಶ್​ (Dwarakish) ಅವರ ಕೊಡುಗೆ ಅಪಾರ. ಹಾಗಾಗಿ ಅವರ ನಿಧನಕ್ಕೆ ಸ್ಯಾಂಡಲ್​ವುಡ್​ನ ಅನೇಕರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ದ್ವಾರಕೀಶ್ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದು, ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಏಪ್ರಿಲ್​ 17ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ನಂತರ ಚಾಮರಾಜಪೇಟೆಯಲ್ಲಿ ದ್ವಾರಕೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ದ್ವಾರಕೀಶ್​ ಅಗಲಿಕೆಗೆ (Dwarakish Death) ದರ್ಶನ್​ ಅವರು ಸೋಶಿಯಲ್​ ಮೀಡಿಯಾದಲ್ಲೂ ಸಂತಾಪ ಸೂಚಿಸಿದ್ದಾರೆ. ‘ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ ‘ಪ್ರಚಂಡ ಕುಳ್ಳ’ನಾಗಿ 5 ದಶಕಗಳು ಸೇವೆ ಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ’ ಎಂದು ನಟ ದರ್ಶನ್​ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.