ದಾವಣಗೆರೆಯಲ್ಲಿ ವಚನ ನಾದ ಲೋಕ: ಸಾವಿರಾರು ವಿದ್ಯಾರ್ಥಿಗಳ ಕಂಠದಲ್ಲಿ ಪ್ರತಿಧ್ವನಿಸಿದ ಬಸವಾದಿ ಶರಣರ ವಚನ!
ಸಾಣಿಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ವಚನ ನಾದ ಲೋಕ ಎಂಬ ವಿಶೇಷ ಕಾರ್ಯಕ್ರಮ ಜರುಗಿತು. 25 ಶಾಲೆಗಳ 10,000ಕ್ಕೂ ಹೆಚ್ಚು ಮಕ್ಕಳು 30 ಶರಣ ವಚನಗಳನ್ನು ಏಕಕಾಲದಲ್ಲಿ ಹಾಡಿದರು. ವಚನ ಸಾಹಿತ್ಯ ಮತ್ತು ಬಸವಾದಿ ಶರಣರ ತತ್ವಗಳನ್ನು ಯುವ ಪೀಳಿಗೆಗೆ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ವಚನನ ನಾದ ಲೋಕಕ್ಕೆ ದೇವನಗರಿ ದಾವಣಗೆರೆ ಸಾಕ್ಷಿ ಆಗಿತ್ತು. ಸಾಣಿಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿಗಳ ನೇತ್ರತ್ವದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ದಾವಣಗೆರೆ ನಗರದ 25 ಶಾಲೆಗಳಿಂದ ಸುಮಾರು 10,000ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬಸವಾದಿ ಶರಣರು ರಚಿಸಿದ 30 ವಚನಗಳನ್ನು ಸುಶ್ರಾವ್ಯವಾಗಿ ಹಾಡಿದರು. ವಚನ ಸಾಹಿತ್ಯದ ಮಹತ್ವ, ಬಸವಣ್ಣನವರ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಅವರ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿತ್ತು. 12ನೇ ಶತಮಾನದ ಕಲ್ಯಾಣ ಕ್ರಾಂತಿ ಮತ್ತು ಅದರ ಸಂದೇಶಗಳನ್ನು ತಿಳಿಸಲು ಇದು ಒಂದು ವಿನೂತನ ಪ್ರಯತ್ನವಾಗಿತ್ತು. ಕಾರ್ಯಕ್ರಮಕ್ಕಾಗಿ 25ಕ್ಕೂ ಹೆಚ್ಚು ಸಂಗೀತ ಶಿಕ್ಷಕರು ವಿದ್ಯಾರ್ಥಿಗಳಿಗೆ 15-20 ದಿನಗಳ ಕಾಲ ತರಬೇತಿ ನೀಡಿದ್ದರು. ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಕಲಹಗಳ ನಿವಾರಣೆಗೆ ವಚನ ಸಾಹಿತ್ಯದ ಮೌಲ್ಯಗಳು ಸಹಕಾರಿಯಾಗಬಲ್ಲವು ಎಂಬ ಆಶಯವನ್ನು ಕಾರ್ಯಕ್ರಮದ ಮೂಲಕ ವ್ಯಕ್ತಪಡಿಸಲಾಯಿತು.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

