ದಾವಣಗೆರೆ: ರಾಜಕಾರಣಿಯಂತೆ ಪೋಸ್, ಸರ್ಕಾರಿ ಕೆಲಸ ಕೊಡಿಸ್ತೇನೆಂದು ಜನರಿಗೆ ಲಕ್ಷಾಂತರ ರೂ. ಟೋಪಿ ಹಾಕಿದ್ದವ ಅರೆಸ್ಟ್
ದಾವಣಗೆರೆಯಲ್ಲಿ ಶ್ರೀನಾಥ್ ಎಂಬಾತ ರಾಜಕೀಯ ನಾಯಕನಂತೆ ಸೋಗು ಹಾಕಿ ಹತ್ತಾರು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ್ದಾನೆ. ಜಲಸಂಪನ್ಮೂಲ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಪಡೆದು ನಕಲಿ ನೇಮಕಾತಿ ಪತ್ರಗಳನ್ನು ನೀಡಿದ್ದಾನೆ. ಈತ ಈಗ ದಾವಣಗೆರೆ ಕೆಟಿಜೆ ಪೊಲೀಸ್ ಠಾಣೆಯ ವಶದಲ್ಲಿದ್ದಾನೆ.
ದಾವಣಗೆರೆ, ನವೆಂಬರ್ 4: ದಾವಣಗೆರೆಯಲ್ಲಿ ರಾಜಕೀಯ ನಾಯಕನಂತೆ ಸೋಗು ಹಾಕಿ, ಜನರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಶ್ರೀನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಶ್ರೀನಾಥ್, ರಾಜಕಾರಣಿಯಂತೆ ಬಿಂಬಿಸಿಕೊಂಡು ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ವಂಚನೆ ಮಾಡಿದ್ದಾನೆ. ಜಲಸಂಪನ್ಮೂಲ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ, ಪ್ರತಿ ವ್ಯಕ್ತಿಯಿಂದ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳನ್ನು ಪಡೆದಿದ್ದಾನೆ. ನಾಗರಾಜ್ ಎಂಬುವವರು ತಮ್ಮ ಮಗನಿಗೆ ಅಟೆಂಡರ್ ಹುದ್ದೆಗಾಗಿ ಮೂರುವರೆ ಲಕ್ಷ ರೂಪಾಯಿ ನೀಡಿದ್ದು, ಶ್ರೀನಾಥ್ ನಕಲಿ ನೇಮಕಾತಿ ಪತ್ರ ಮತ್ತು ಸರ್ಕಾರಿ ಸೀಲ್‌ಗಳನ್ನು ಬಳಸಿ ವಂಚಿಸಿದ್ದ. ಈ ಬಗ್ಗೆ ತಿಳಿಯಲು ಬೆಂಗಳೂರಿನ ಜಲಸಂಪನ್ಮೂಲ ಕಚೇರಿಗೆ ತೆರಳಿದಾಗ ಮೋಸ ಹೋಗಿರುವುದು ನಾಗರಾಜ್ ಅವರಿಗೆ ತಿಳಿದುಬಂದಿದೆ. ನಂತರ ನಾಗರಾಜ್ ಹಾಗೂ ಇತರ ಸಂತ್ರಸ್ತರು ಶ್ರೀನಾಥ್‌ನನ್ನು ದಾವಣಗೆರೆ ಕೆಟಿಜೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಯು ಹತ್ತಾರು ಜನರಿಗೆ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
