ಹೊರ ರಾಜ್ಯ, ಹೊರ ದೇಶದಿಂದ ಬಿಜೆಪಿಗೇ ದುಡ್ಡು ಬಂದಿದೆ: ಸಿದ್ದರಾಮಯ್ಯ ಆರೋಪ
ಧರ್ಮಸ್ಥಳ ಪ್ರಕರಣ ಸಂಬಂಧ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮಧ್ಯೆ ವಾಕ್ಸಮರ ತೀವ್ರಗೊಂಡಿದೆ. ಈಗಾಗಲೇ ಬಿಜೆಪಿ ಧರ್ಮಸ್ಥಳ ಚಲೋ ಸಮಾವೇಶ ನಡೆಸಿದ್ದು, ಇದೀಗ ಕಾಂಗ್ರೆಸ್ ಕೂಡ ಧರ್ಮಸ್ಥಳ ಯಾತ್ರೆಗೆ ಮುಂದಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 2: ‘ಧರ್ಮಸ್ಥಳ ಪ್ರಕರಣದಲ್ಲಿ ಅಪಪ್ರಚಾರ ಮಾಡುವುದಕ್ಕಾಗಿ ಹೊರದೇಶಗಳಿಂದ ದುಡ್ಡು ಹರಿದು ಬಂದಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು’ ಎಂಬ ಬಿಜೆಪಿ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೇ ಹೊರದೇಶ ಹಾಗೂ ಹೊರ ರಾಜ್ಯಗಳಿಂದ ದುಡ್ಡು ಬಂದಿದೆ. ಇಲ್ಲ ಅಂದರೆ, ಇವರು ಇಷ್ಟೆಲ್ಲ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅಲ್ಲದೆ, ಬಿಜೆಪಿ ಅವರದ್ದು ಕೇವಲ ರಾಜಕೀಯ ಪ್ರೇರಿತ ಹೋರಾಟ ಎಂದರು.
ಈಗ ಎಸ್ಐಟಿ ತನಿಖೆ ನಡೆಸುತ್ತಿದೆ. ಇವರಿಗೆ (ಬಿಜೆಪಿ) ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ? ಒಂದು ಕಡೆ ಸೌಜನ್ಯ ಮನೆಯವರನ್ನು ಎತ್ತಿಕಟ್ಟುತ್ತಿದ್ದಾರೆ. ಮತ್ತೊಂದು ಕಡೆ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ. ಆ ಪ್ರಕರಣದಲ್ಲಿ (ಸೌಜನ್ಯ) ಸಿಬಿಐ ತನಿಖೆ ನಡೆಸಿತ್ತಲ್ಲವೇ? ಸಿಬಿಐ ಯಾರ ಅಧೀನದಲ್ಲಿ ಬರುತ್ತದೆ? ಸುಪ್ರೀಂ ಕೋರ್ಟ್ಗೆ ಹೋಗುವುದು ಬಿಡುವುದು ಸೌಜನ್ಯ ತಾಯಿಗೆ ಸಂಬಂಧಪಟ್ಟ ವಿಚಾರ ಎಂದು ಸಿದ್ದರಾಮಯ್ಯ ಹೇಳಿದರು.