ಅಯೋಧ್ಯೆಯ ರಾಮಲಲ್ಲಾ ಪೂಜೆಗೆ ಧರ್ಮಸ್ಥಳ ಬೆಳ್ಳಿ ಪರಿಕರಗಳು ರವಾನೆ
ಧರ್ಮಸ್ಥಳದಿಂದ ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರಗಳನ್ನು ನೀಡಲಾಗಿದೆ. ಹೌದು ಹರ್ಷೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಿಂದ ಬಂದ ಬೆಳ್ಳಿಯ ಪೂಜಾ ಪರಿಕರಗಳನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು.
ಉಡುಪಿ, ಜನವರಿ 15: ಅಯೋಧ್ಯೆಯ (Ayodhya) ಶ್ರೀರಾಮಮಂದಿರದಲ್ಲಿ (Shri Ram) ರಾಮಲಲ್ಲಾ (ಬಾಲರಾಮ)ನ ಮೂರ್ತಿಯನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುತ್ತದೆ. ಈ ಗಳಿಗೆಯನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಭಕ್ತರು ಕಾದು ಕುಳಿತಿದ್ದಾರೆ. ಇನ್ನು ಅಯೋಧ್ಯೆಯ ರಾಮಮಂದಿರಕ್ಕೂ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಅನೇಕ ಕಾರ್ಮಿಕರು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೊಂದು ಕಡೆಯಾದರೇ, ಮತ್ತೊಂದು ಕಡೆ ಶ್ರೀ ಮಂಜುನಾಥನ ವಾಸಸ್ಥಾನ ಎಂದೇ ನಂಬಲಾಗಿರುವ ಧರ್ಮಸ್ಥಳದಿಂದ (Dharmastal) ಅಯೋಧ್ಯೆಯ ರಾಮಲಲ್ಲಾನ ಪೂಜೆಗೆ ಬೆಳ್ಳಿ ಪರಿಕರಗಳನ್ನು ನೀಡಲಾಗಿದೆ.
ಹೌದು ಉಡುಪಿ ಎಸ್ಡಿಎಮ್ ಆಯುರ್ವೇದ ಕಾಲೇಜಿನ ಕಾರ್ಯದರ್ಶಿ ಹರ್ಷೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಿಂದ ಬಂದ ಬೆಳ್ಳಿಯ ಪೂಜಾ ಪರಿಕರಗಳನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆ ರೂಪದಲ್ಲಿ ಪೂಜಾ ಪರಿಕರಗಳನ್ನು ನೀಡಲಾಗಿದೆ. ಬಾಲರಾಮನ ಅಭಿಷೇಕ, ಪೂಜೆಗೆ ಬಳಕೆಗೆ ಬೇಕಾದ ಬೆಳ್ಳಿಯ ಪರಿಕರಗಳು ಇರುವ ಬಾಕ್ಸ್ ಅನ್ನು ನೀಡಿದರು.