50 ಲಕ್ಷ ಲಂಚ ರೂ. ಪಡೆದು ಲಾಕ್ ಆದ ತಹಶೀಲ್ದಾರ್: ಇದೀಗ ಮತ್ತಷ್ಟು ಅಕ್ರಮಗಳು ಬಯಲಿಗೆ

Edited By:

Updated on: Sep 23, 2026 | 12:16 PM

ಧಾರವಾಡದ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು 50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ನಂತರ, ಈ ಪ್ರಕರಣದಲ್ಲಿ ಹೊಸ ಸ್ವರೂಪಗಳು ಬಯಲಾಗಿವೆ. ಅಂಗಡಿ ಕುಟುಂಬ ಮೂಲ ಭೂಮಾಲೀಕರಾಗಿ ಮಂಜುನಾಥ್ ಹರಳಿ ಕಟ್ಟೆ ಮತ್ತು ಕಂದಾಯ ಇಲಾಖೆಯ ಇತರ ಅಧಿಕಾರಿಗಳ ವಿರುದ್ಧ ಅಕ್ರಮ ಭೂ ವ್ಯವಹಾರ, ದಾಖಲೆ ತಿದ್ದುಪಡಿ ಆರೋಪ ಹೊರಿಸಿದ್ದಾರೆ. ವಿಶೇಷ ತನಿಖಾ ತಂಡ (SIT) ಮತ್ತು ಜಾರಿ ನಿರ್ದೇಶನಾಲಯದ (ED) ತನಿಖೆಗೆ ಆಗ್ರಹ ಕೇಳಿಬಂದಿದೆ.

ಧಾರವಾಡ, ಸೆಪ್ಟೆಂಬರ್ 23: ಇತ್ತೀಚೆಗೆ ಧಾರವಾಡದಲ್ಲಿ ನಡೆದ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಸಚ್ಚಿದಾನಂದ ಕುಚನೂರು 50 ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಲೆಗೆ ಬಿದ್ದಿದ್ದರು. ಈ ಪ್ರಕರಣದಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಹಲವಾರು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ. ಮೂಲ ಭೂಮಾಲೀಕರೆಂದು ಹೇಳಿಕೊಳ್ಳುವ ಅಂಗಡಿ ಕುಟುಂಬವು ಈ ಪ್ರಕರಣದಲ್ಲಿ ಗಂಭೀರ ಆರೋಪಗಳನ್ನು ಮಾಡಿದೆ.

ತಹಸೀಲ್ದಾರ್ ಲಂಚ ಪಡೆದಿರುವುದು ಮಾತ್ರವಲ್ಲದೆ, ಲಂಚ ನೀಡಿದ ಮಂಜುನಾಥ್ ಹರಳಿ ಕಟ್ಟೆ ಅವರೂ ಬೇರೆ ಬೇರೆ ರೀತಿಯಲ್ಲಿ ಅಕ್ರಮಗಳನ್ನು ನಡೆಸಿದ್ದಾರೆ ಎಂದು ಅಂಗಡಿ ಕುಟುಂಬ ಆರೋಪಿಸಿದೆ. ತಮ್ಮ 33 ಎಕರೆ ಜಮೀನಿನಲ್ಲಿ ಖರಾಬ್ ಭೂಮಿಯನ್ನೂ ಸೇರಿಸಿ ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ ಮತ್ತು ಮಾರಾಟ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಕಂದಾಯ ಇಲಾಖೆಯ ಇತರ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣದ ಹಿಂದಿರುವ ಸತ್ಯವನ್ನು ಬಯಲಿಗೆ ತರಲು ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅಂಗಡಿ ಕುಟುಂಬ ಆಗ್ರಹಿಸಿದೆ. ಅಲ್ಲದೆ, 50 ಲಕ್ಷ ರೂ.ಗಳ ದೊಡ್ಡ ಮೊತ್ತದ ನಗದು ವ್ಯವಹಾರದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವೂ (ED) ತನಿಖೆಗೆ ಇಳಿಯಬೇಕು ಎಂದು ಜೆಡಿಎಸ್ ಮುಖಂಡ ಗುರುರಾಜ್ ಹುಣಸಿ ಮರದ್ ಒತ್ತಾಯಿಸಿದ್ದಾರೆ. ಇದು ಕೇವಲ ಒಬ್ಬ ಅಧಿಕಾರಿಯ ಪ್ರಕರಣವಲ್ಲದೆ, ದೊಡ್ಡ ಪ್ರಮಾಣದ ಅಕ್ರಮ ಭೂ ವ್ಯವಹಾರದ ಜಾಲ ಎಂದು ಕುಟುಂಬ ಆರೋಪಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More