ಸಂಬಂಧದಲ್ಲಿ ಬಿರುಕು ಕಂಡಾಗ ದುಡುಕಿ ನಿರ್ಧಾರ ತೆಗೆದುಕೊಳ್ಳದೆ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಿ: ಡಾ ಸೌಜನ್ಯ ವಸಿಷ್ಠ

ಸಂಬಂಧದಲ್ಲಿ ಬಿರುಕು ಕಂಡಾಗ ದುಡುಕಿ ನಿರ್ಧಾರ ತೆಗೆದುಕೊಳ್ಳದೆ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಿ: ಡಾ ಸೌಜನ್ಯ ವಸಿಷ್ಠ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2021 | 4:55 PM

ಇಂಥ ಸಮಸ್ಯೆಗೆ ಬೇರ್ಪಡುವಿಕೆ ಒಂದೇ ಉಪಾಯವಲ್ಲ, ಸಮಸ್ಯೆಗಳನ್ನು ಪರಸ್ಪರ ಮಾತಾಡಿ, ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸೌಜನ್ಯ ಹೇಳುತ್ತಾರೆ. ತಪ್ಪು ಯಾರದ್ದೇ ಆಗಿರಲಿ, ಅದನ್ನು ಸಂಬಂಧ ಮುರಿದು ಹೋಗುವಷ್ಟು ಹಿಗ್ಗಲು ಬಿಡಬಾರದು, ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬೇಕು.

ಖ್ಯಾತ ಮನಶಾಸ್ತ್ರಜ್ಞೆ ಡಾ ಸೌಜನ್ಯ ವಸಿಷ್ಠ ಅವರು ಇಲ್ಲಿ ಸಂಬಂಧಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಗಂಡ-ಹೆಂಡತಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವೇನು ಅನ್ನೋದನ್ನು ಅವರು ಎಳೆಎಳೆಯಾಗಿ ವಿಶ್ಲೇಷಿಸಿದ್ದಾರೆ. ಹೊಸತನ ಕಂಡುಕೊಳ್ಳುವ ಪ್ರಯತ್ನದಲ್ಲಿ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಮೋಸ ಮಾಡುವುದು ಆಗುತ್ತಿರುತ್ತದೆ. ಹೊಸ ಪ್ರಯೋಗ, ಹೊಸ ಅನುಭವ ಅಂತ ಅರಸಿಕೊಂಡು ಹೋದಾಗಲೇ ಪತಿ-ಪತ್ನಿಯ ನಡುವೆ ಸಂಬಂಧ ಹದಗೆಡುತ್ತದೆ. ಹೆಂಡತಿಗೆ ಮೋಸ ಮಾಡುವ ಗಂಡನಿಗೆ ಮತ್ತು ಗಂಡನಿಗೆ ಮೋಸ ಮಾಡುವ ಹೆಂಡತಿಗೆ ಕ್ರಮೇಣವಾಗಿ ತಾವು ಕೈ ಹಿಡಿದ ಸಂಗಾತಿಯ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಬಾಳ ಸಂಗಾತಿ ತನಗೆ ಮೊದಲಿನಂತೆ ಪ್ರಾಮುಖ್ಯತೆ ನೀಡುತ್ತಿಲ್ಲ ಅನ್ನೋದು ಖಾತ್ರಿಯಾದಾಗ ಅದು ವೈವಾಹಿಕ ಸಂಬಂಧ ಮುರಿದು ಬೀಳುವ ಹಂತಕ್ಕೂ ಹೊಗುವುದುಂಟು ಎಂದು ಸೌಜನ್ಯ ಹೇಳುತ್ತಾರೆ.

ಆದರೆ, ಇಂಥ ಸಮಸ್ಯೆಗೆ ಬೇರ್ಪಡುವಿಕೆ ಒಂದೇ ಉಪಾಯವಲ್ಲ, ಸಮಸ್ಯೆಗಳನ್ನು ಪರಸ್ಪರ ಮಾತಾಡಿ, ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸೌಜನ್ಯ ಹೇಳುತ್ತಾರೆ. ತಪ್ಪು ಯಾರದ್ದೇ ಆಗಿರಲಿ, ಅದನ್ನು ಸಂಬಂಧ ಮುರಿದು ಹೋಗುವಷ್ಟು ಹಿಗ್ಗಲು ಬಿಡಬಾರದು, ಮಾತುಕತೆ ಮೂಲಕ ಸರಿಪಡಿಸಿಕೊಳ್ಳಬೇಕು. ಸಂಗಾತಿಗೆ ಬೇರೆಯವರ ಬಗ್ಗೆ ಆಕರ್ಷಣೆ ಹುಟ್ಟಲು ಕಾರಣವೇನು, ಹಿಂದೆ ಯಾವತ್ತೂ ಆಗಿರದ ಸಮಸ್ಯೆ ಈಗ ಯಾಕೆ ಆಗುತ್ತಿದೆ ಮೊದಲಾದ ಅಂಶಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೆಲ ಸಲ ತಪ್ಪು ನಮ್ಮಿಂದಲೂ ಅಗಿರುತ್ತದೆ, ಅದನ್ನು ಅಂಗೀಕಾರ ಮಾಡಿಕೊಳ್ಳುವ ಎದೆಗಾರಿಕೆ ನಮ್ಮಲ್ಲರಿಬೇಕು ಎಂದು ಸೌಜನ್ಯ ಹೇಳುತ್ತಾರೆ.

ಸಂಬಂಧ ಹದಗೆಡುತ್ತಿದೆ ಅಂತ ಗೊತ್ತಾದಾಗ ಅದನ್ನು ಸಂಗಾತಿಯೊಂದಿಗೆ ಚರ್ಚಿಸಿ ಅದನ್ನು ಸರಿಪಡಿಸಿಕೊಳ್ಳಲು ಮತ್ತು ಅದರ ಪುನರಾವರ್ತನೆ ಆಗದಂತಿರಲು ಕನಿಷ್ಠ ಮೂರು ತಿಂಗಳು ಸಮಯ ನೀಡಬೇಕು. ತಪ್ಪು ಅಥವಾ ಮೋಸ ಮಾಡಿರುವ ಸಂಗಾತಿಗೆ ಅದು ಮನದಟ್ಟು ಆಗಿದೆ ಅಂತಾದರೆ ಅವರು ಪುನಃ ಅಂಥ ತಪ್ಪು ಮಾಡುವ ಉಸಾಬರಿಗೆ ಹೊಗುವುದಿಲ್ಲ ಎಂದು ಡಾ ಸೌಜನ್ಯ ಹೇಳುತ್ತಾರೆ. ದುಡಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಬದಲು ಶಾಂತ ರೀತಿಯಿಂದ ಸಮಸ್ಯೆ ಬಗ್ಗೆ ಯೋಚಿಸಿ ಹಳಸಿದ ಸಂಬಂಧವನ್ನು ಪುನರುಜ್ಜೀವಗೊಳಿಸಲು ಒಂದು ಚಾನ್ಸ್ ಕೊಡಬೇಕು ಎನ್ನುತ್ತಾರೆ ಸೌಜನ್ಯ.

ಇದನ್ನೂ ಓದಿ: Facebook: ಎರಡು ಹೊಸ ವಿಡಿಯೋ-ಕಾಲಿಂಗ್ ಡಿವೈಸ್‌ ಬಿಡುಗಡೆ ಮಾಡಿದ ಫೇಸ್‌ಬುಕ್: ಬೆಲೆ, ವಿಶೇಷತೆ ಏನು?