ಹೈಕಮಾಂಡ್ ನಾಯಕರ ಭೇಟಿ ಮಾಡೇ ಇಲ್ಲ ಎಂದ ಡಿಕೆ ಶಿವಕುಮಾರ್: ದೆಹಲಿಗೆ ಹೋಗಿದ್ಯಾಕೆ? ಇಲ್ಲಿದೆ ಉತ್ತರ

Updated on: Nov 06, 2025 | 9:58 AM

ನವೆಂಬರ್ ರಾಜಕೀಯ ಕ್ರಾಂತಿಯ ಊಹಾಪೋಹಗಳ ನಡುವೆ ದೆಹಲಿಗೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿ ಭೇಟಿಯ ಉದ್ದೇಶ ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲ ವಿವಾದಗಳ ಕುರಿತು ಚರ್ಚೆ ನಡೆಸುವುದು ಎಂದು ತಿಳಿಸಿದ್ದಾರೆ. ಈ ವಿಷಯಗಳ ಬಗ್ಗೆ ಮಾತ್ರ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ನವೆಂಬರ್ 6: ನವೆಂಬರ್ ಕ್ರಾಂತಿಯ ಊಹಾಪೋಹಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ, ಮಾಡುತ್ತಲೂ ಇಲ್ಲ ಎಂದು ತಿಳಿಸಿದ್ದಾರೆ. ಎಲ್ಲಾ ಸುಳ್ಳು. ನಾನು ಯಾರನ್ನೂ ಭೇಟಿ ಮಾಡಿಲ್ಲ, ಭೇಟಿ ಮಾಡೋದೂ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ. ದೆಹಲಿ ಭೇಟಿಯ ಮುಖ್ಯ ಉದ್ದೇಶ ರಾಜ್ಯದ ಪ್ರಮುಖ ಜಲ ವಿವಾದಗಳಾದ ಕಾವೇರಿ, ಮೇಕೆದಾಟು ಮತ್ತು ಕೃಷ್ಣಾ ನದಿ ವಿಚಾರಗಳ ಕುರಿತು ಚರ್ಚೆ ನಡೆಸುವುದಾಗಿತ್ತು ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ. ಮಹದಾಯಿ ವಿಚಾರದಲ್ಲೂ ಕೆಲವು ಅಂಶಗಳಿದ್ದು, ಸದ್ಯಕ್ಕೆ ಆ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಬುಧವಾರ ರಾತ್ರಿ ದೆಹಲಿಯಲ್ಲೇ ತಂಗಿರುವ ಡಿಕೆ ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 06, 2025 09:50 AM