ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ

Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2025 | 10:21 PM

ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ನಡೆದ "ಕಾವೇರಿ ಆರತಿ" ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಜಲಮಾತೆಗೆ ಪ್ರಾರ್ಥನೆ ಮಾಡುವುದು ನಮ್ಮ ಕರ್ತವ್ಯ. ನೀರಿನ ಉಳಿತಾಯ ಮತ್ತು ಸಂರಕ್ಷಣೆಗೆ ಎಲ್ಲರೂ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಕೆಆರ್‌ಎಸ್‌ನಲ್ಲೂ ಇಂತಹ ಕಾರ್ಯಕ್ರಮ ನಡೆಸುವ ಯೋಜನೆಯಿದೆ ಎಂದಿದ್ದಾರೆ.

ಬೆಂಗಳೂರು, ಮಾರ್ಚ್​ 21: ನಗರದ ಸ್ಯಾಂಕಿ ಕೆರೆ ಆವರಣದಲ್ಲಿ ಇಂದು ‘ಕಾವೇರಿ ಆರತಿ’ ಕಾರ್ಯಕ್ರಮ ನಡೆಯಿತು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಪತ್ನಿಯೊಂದಿಗೆ ಗಂಗಾ ಮಾತೆಗೆ ಆರತಿ ಬೆಳಗಿದರು. ಈ ವೇಳಿ ಮಾತನಾಡಿದ ಅವರು, ಜಲಮಾತೆಗೆ ಪ್ರಾರ್ಥನೆ ಮಾಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನೀರಿಲ್ಲದೆ ನಾವ್ಯಾರೂ ಬದಕಲು ಸಾಧ್ಯವಿಲ್ಲ, ನೀರಿಂದಲೇ ನಾಗರಿಕತೆ. ನೀರು ಉಳಿಸಿಕೊಳ್ಳಲು, ನೀರು ಸಂರಕ್ಷಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಮುಂದೆ ಕೆಆರ್‌ಎಸ್‌ನಲ್ಲೂ ಕಾವೇರಿ ಆರತಿ ಕಾರ್ಯಕ್ರಮ ನಡೆಸುತ್ತೇವೆ. ವಿಶೇಷವಾಗಿ ಧಾರ್ಮಿಕವಾಗಿ ಕಾವೇರಿ ಮಾತೆಗೆ ಪ್ರಾರ್ಥನೆ ಮಾಡಲಾಗಿದೆ. ಕಾವೇರಿ ನೀರಿನಿಂದ ಜ್ಯೂಸ್‌ ಮಾಡುತ್ತೇವೆ, ಪಾನಕ ಮಾಡುತ್ತೇವೆ. ನೀರನ್ನ ರಕ್ಷಣೆ ಮಾಡಬೇಕು, ಸರಿಯಾದ ರೀತಿ ಜಲ ರಕ್ಷಣೆ ಆಗಬೇಕು. ದೈನಂದಿನ ಚಟುವಟಿಕೆಗಳಲ್ಲಿ ಮಿತವಾಗಿ ನೀರು ಬಳಸಿ, ನೀರು ಉಳಿಸುತ್ತೇನೆ. ಮಳೆ ಕೊಯ್ಲು ವಿಧಾನ ಅನುಸರಿಸಿ ಭವಿಷ್ಯಕ್ಕಾಗಿ ನೀರು ಉಳಿಸುತ್ತೇನೆ ಎಂದು ಕಾರ್ಯಕ್ರಮದ ವೇದಿಕೆಯಿಂದಲೇ ಜಲ ರಕ್ಷಣೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.