‘ಚುನಾವಣೆ ಆಗ್ಲೀ, ಸರ್ಕಾರ ಪತನವಾಗುತ್ತೆ’- ಶಿಂಧೆ ಹೇಳಿಕೆ ಬೆನ್ನಲ್ಲೇ ಡಿಕೆ ಶಿವಕುಮಾರ್ ಹೇಳಿಕೆ

|

Updated on: May 13, 2024 | 5:23 PM

DK Shivakumar reaction to Eknath Shinde's Statement: ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. ಬಿಜೆಪಿ ಅಧಿಕಾರ ಪಡೆಯಲಿದೆ ಎಂದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಬಳಿಕ ಪತನವಾಗುವುದು ಕರ್ನಾಟಕ ಸರ್ಕಾರವಲ್ಲ, ಮಹಾರಾಷ್ಟ್ರ ಸರ್ಕಾರ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸುತ್ತಿರುವ ಶಿವಸೇನಾ ಮತ್ತು ಎನ್​ಸಿಪಿ ಭಿನ್ನಮತೀಯರು ವಾಪಸ್ ತಮ್ಮ ಮೂಲ ಪಕ್ಷಗಳಿಗೆ ಹೋಗಲಿದ್ದಾರೆ. ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲಿದ್ದಾರೆ ಎಂದು ಡಿಕೆಶಿ ತಿಳಿಸಿದ್ದಾರೆ.

ಬೆಂಗಳೂರು, ಮೇ 13: ಮಹಾರಾಷ್ಟ್ರದಲ್ಲಿ ನಡೆದ ಕಮಲ ಕಾರ್ಯಾಚರಣೆ ರೀತಿಯಲ್ಲಿ ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಆಪರೇಶನ್ ನಡೆಯಲಿದೆ. ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ನೀಡಿದ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡಿದ್ದಾರೆ. ರವಿ ಗಣಿಗ ಅವರು ಶಿಂಧೆಯನ್ನು ಶಕುನಿಗೆ ಹೋಲಿಕೆ ಮಾಡಿದ್ದಾರೆ. ಶಿಂಧೆ ಭ್ರಮೆಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಿಂಧೆ ಹೇಳಿದಂತೆ ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ. ಆದರೆ, ಕರ್ನಾಟಕ ಸರ್ಕಾರವಲ್ಲ, ಮಹಾರಾಷ್ಟ್ರ ಸರ್ಕಾರ ಬಿದ್ದುಹೋಗುತ್ತದೆ ಎಂದಿದ್ದಾರೆ.

ಸರ್ಕಾರ ಬಿದ್ದು ಹೋಗುತ್ತೆ ನೋಡ್ತಾ ಇರಿ. ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದ ಶಿವಸೇನಾ ಮತ್ತು ಎನ್​ಸಿಪಿ ಬಂಡಾಯ ಶಾಸಕರು ವಾಪಸ್ ಅವರ ಪಕ್ಷಗಳಿಗೆ ಮರಳಲಿದ್ದಾರೆ. ಕಾಂಗ್ರೆಸ್, ಎನ್​ಸಿಪಿ ಮತ್ತು ಮೂಲ ಶಿವಸೇನಾ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿವೆ ಎಂದು ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಸರ್ಕಾರ ಪತನ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಮಹಾರಾಷ್ಟ್ರದಲ್ಲಿ ಮೂಲ ಶಿವಸೇನಾ ಪಕ್ಷದಿಂದ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹಲವು ಶಾಸಕರು ಬಂಡಾಯ ಎದ್ದಿದ್ದರು. ಎನ್​ಸಿಪಿ ಪಕ್ಷದಲ್ಲೂ ಬಂಡಾಯ ಶಾಸಕರು ವಲಸೆ ಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಏಕನಾಥ್ ಶಿಂಧೆ ಸಿಎಂ ಸ್ಥಾನ ಪಡೆದರು. ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ