ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕರ್ನಾಟಕದಲ್ಲೇ ಕನ್ನಡ ಮಾತನಾಡಬಾರದು ಎಂದು ಧಮ್ಕಿ ಹಾಕಿದರೆ ಹೇಗೆ? ಬನ್ನೇರುಘಟ್ಟ ರಸ್ತೆ ಸಮೀಪದ ಕಲ್ಕೆರೆ ಬಳಿ ಇರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡದಂತೆ ವಾರ್ಡನ್ ಧಮ್ಕಿ ಹಾಕಿದ ಆರೋಪ ಕೇಳಿಬಂದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಸದ್ಯ ಈ ವಿಚಾರವಾಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಆನೇಕಲ್, ಜನವರಿ 5: ಕರ್ನಾಟಕದಲ್ಲಿ ಕನ್ನಡ ಮಾತನಾಡುವಂತಿಲ್ಲವೇ? ಇಂಥದ್ದೊಂದು ಪ್ರಶ್ನೆ ಮೂಡಿಸುವಂತಹ ಘಟನೆ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ರಸ್ತೆ ಸಮೀಪದ ಕಲ್ಕೆರೆ ಬಳಿ ಇರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಹಾಸ್ಟೆಲ್ ವಾರ್ಡನ್ ಒಬ್ಬರು, ‘ಕನ್ನಡ ಮಾತನಾಡಬೇಡಿ’ ಎಂದು ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬನ್ನೇರುಘಟ್ಟದಲ್ಲಿರುವ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ ವಾರ್ಡನ್ ಸುರೇಶ್ ಎಂಬಾತ, ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನ್ನಡದಲ್ಲಿ ಮಾತನಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ‘ಕನ್ನಡ ಮಾತನಾಡುವುದು ಇಲ್ಲಿ ಸರಿಯಲ್ಲ, ಕನ್ನಡ ಮಾತನಾಡಬೇಕಾದರೆ ಮನೆಯಲ್ಲೇ ಮಾತನಾಡಿ’ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದಲ್ಲದೆ, ‘ಕನ್ನಡ ಬೇಡ, ಹಿಂದಿಯಲ್ಲಿ ಮಾತನಾಡಿ’ ಎಂದು ವಾರ್ಡನ್ ಅವಾಜ್ ಹಾಕಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧಿತ ವಿಡಿಯೋ ಈಗ ವೈರಲ್ ಆಗುತ್ತಿದೆ.
ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಹಾಸ್ಟೆಲ್ ವಾರ್ಡನ್ ಸುರೇಶ್ರನ್ನು ಕೆಲಸದಿಂದ ವಜಾಗೊಳಿಸಿದೆ.
