ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡದ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್!
ವಿಧಾನ ಸಭಾ ಚುನಾವಣೆಯಲ್ಲಿ ಡಾ ಕೆ ಸುಧಾಕರ್ ಅವರನ್ನು ಸೋಲಿಸಿದ ಬಳಿಕ ಪ್ರದೀಪ್ ಈಶ್ವರ್ ಸಂಸದನ ವಿರುದ್ಧ ಅಗತ್ಯಕ್ಕಿಂತ ಜಾಸ್ತಿ ಮಾತಾಡಿದ್ದರು. ಅದರೆ ಲೋಕಸಭಾ ಚುನಾವಣೆಯಲ್ಲಿ ಸುಧಾಕರ್ ಭರ್ಜರಿ ಜಯ ಸಾಧಿಸುವುದರ ಮೂಲಕ ಈಶ್ವರ್ ಬಾಯಿಗೆ ಬೀಗ ಹಾಕಿದರು.
ಚಿಕ್ಕಬಳ್ಳಾಪುರ: ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಒಂದು ಅಪರೂಪದ ದೃಶ್ಯ ಕಾಣಿಸಿತು. ಬಿಜೆಪಿ ಸಂಸದ ಡಾ ಕೆ ಸುಧಾಕರ್ ಮತ್ತು ಸ್ಥಳೀಯ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ಸಂಬಂಧ ಎಲ್ಲರಿಗೂ ಗೊತ್ತು. ಇವತ್ತು ಅವರಿಬ್ಬರನ್ನು ಜನ್ಮಾಷ್ಟಮಿ ಪೂಜೆಗೆ ಕರೆಸಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂಸಿ ಸುಧಾಕರ್ ಸಹ ಆಹ್ವಾನಿತರಾಗಿದ್ದರು. ಸಂಸದ ಸುಧಾಕರ್ ಮತ್ತು ಶಾಸಕ ಈಶ್ವರ್ ಪರಸ್ಪರ ಮುಖಾಮುಖಿಯಾದಾಗ ಹೇಗೆ ವರ್ತಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಅದರೆ ಅವರು ವಿಶ್ ಮಾಡಿಕೊಳ್ಳುವ ಮಾತು ಹಾಗಿರಲಿ, ಒಬ್ಬರ ಮುಖ ಮತ್ತೊಬ್ಬರು ಸಹ ನೋಡಲಿಲ್ಲ. ಪ್ರದೀಪ್ ಈಶ್ವರ್ ಬಿಗುಮಾನದೊಂದಿಗೆ ಕುಳಿತಿರುವುದನ್ನು ಇಲ್ಲಿ ನೋಡಬಹುದು. ಸುಧಾಕರ್ ಅವರ ಹೆಸರು ಕರೆದಾಗ ವೇದಿಕೆ ಹತ್ತಿ ಬರುವ ಅವರು ಉಸ್ತುವಾರಿ ಸಚಿವರಿಗೆ ವಿಶ್ ಮಾಡುತ್ತಾರೆಯೇ ಹೊರತು ಈಶ್ವರ್ ಕಡೆ ನೋಡುವುದೂ ಇಲ್ಲ. ದೀಪ ಬೆಳಗುವಾಗಲೂ ಅವರು ಒಬ್ಬರ ಮುಖ ಮತ್ತೊಬ್ಬರು ನೋಡಲ್ಲ. 2023 ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇವರ ನಡುವೆ ಶುರುವಾದ ವೈರತ್ವ ಲೋಕಸಭಾ ಚುನಾವಣೆನ ಮುಗಿದ ನಂತರವೂ ಮುಂದುವರಿದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುಧಾಕರ್ ಗೆಲುವು ಬೆನ್ನಲ್ಲೇ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ; ಕಿಟಕಿ ಗಾಜು ಪುಡಿ ಪುಡಿ