ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: ಬೆಳಗಾವಿಯ ಬಿಜೆಪಿ ಮುಖಂಡ ಸೇರಿ 25 ಜನರ ವಿರುದ್ಧ FIR
ಬೆಳಗಾವಿಯಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರು ಡಿಲೀಟ್ ಆಗಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ಮುಖಂಡ ರವಿ ಪಾಟೀಲ್ ಸೇರಿ 25 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೋಗಸ್ ಫಾರ್ಮ್ ಬಳಸಿ ಹೆಸರುಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ ಎಂದು ವಾರ್ಡ್ 12ರ ಬಿಎಲ್ಓ ದೂರು ನೀಡಿದ್ದು, ಘಟನೆ ನಡೆದು ಎಂಟು ದಿನಗಳ ಬಳಿಕ ದೂರು ದಾಖಲಿಸಲಾಗಿದೆ.
ಬೆಳಗಾವಿ, ಅಕ್ಟೋಬರ್ 01: ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ ಸಂಬಂಧ ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ರವಿ ಪಾಟೀಲ್ ಸೇರಿ 25 ಜನರ ವಿರುದ್ಧ FIR ದಾಖಲಾಗಿದೆ. ಮಾರ್ಕೆಟ್ ಠಾಣೆಗೆ ವಾರ್ಡ್ 12ರ ಬಿಎಲ್ಒ ದೂರಿನ ಅನ್ವಯ ಡಾ.ರವಿ ಪಾಟೀಲ್, ವಿಜಯ ಆಸ್ಪತ್ರೆ ಸಿಬ್ಬಂದಿ ಪ್ರಶಾಂತ್ ಮುಂದಿನಮನಿ, ಶಂಕರ್ ನಾಯಕ್ ಸೇರಿದಂತೆ ಹಲವರ ವಿರುದ್ಧ ಕೇಸ್ ದಾಖಲಾಗಿದೆ. 198 ಮುಸ್ಲಿಂ ಮತದಾರರ ಗುರಿಯಾಗಿಸಿ ಡಿಲೀಟ್ ಮಾಡುವ ಒಳ ಸಂಚು ಮತ್ತು ನಕಲಿ ದಾಖಲಾತಿ, ಸುಳ್ಳು ಮಾಹಿತಿ ನೀಡಿದ ಆರೋಪ ಇವರ ವಿರುದ್ಧ ಕೇಳಿಬಂದಿದೆ. ಸೆ.22ರಂದು ವೀರಭದ್ರನಗರದ ಮತಗಟ್ಟೆ 195, 196ರಲ್ಲಿ ಜೀವಂತವಾಗಿರುವ ಹಾಗೂ ಕಾನೂನುಬದ್ಧ ಇರುವ ಮತದಾರರ ಹೆಸರು ಡಿಲೀಟ್ ಮಾಡಿಸಲು ಆರೋಪಿಗಳು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ರವಿ ಪಾಟೀಲ್ ಸೇರಿ ಮೂವರನ್ನು ಸ್ಥಳೀಯರು ಹಿಡಿದಿದ್ದರು. ಫಾರ್ಮ್ ನಂ.7ರ ಮೂಲಕ ಡಿಲೀಟ್ ಮಾಡಿಸಲು ಯತ್ನ ಆರೋಪ ಸಂಬಂಧ ಘಟನೆ ನಡೆದು ಎಂಟು ದಿನಗಳ ಬಳಿಕ ಎಫ್ಐಆರ್ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

