ಹೊಸ ವರ್ಷದ ಮೊದಲ ಶನಿವಾರ ಧಾರವಾಡ ನುಗ್ಗೇಕೇರಿ ಹನುಮನ ಸನ್ನಿಧಾನದಲ್ಲಿ ಸಹಸ್ರಾರು ಭಕ್ತರು!
ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ರಾತ್ರಿಯಿಡೀ ಕಂಠಪೂರ್ತಿ ಕುಡಿದು ಹೊಸ ವರ್ಷದ ಮೊದಲ ದಿನ ಹಾಸಿಗೆಯಲ್ಲಿ ಬಿದ್ದುಕೊಳ್ಳೋದು ಸರ್ವಥಾ ನಮ್ಮ ಸಂಸ್ಕೃತಿ ಅಲ್ಲ.
ಹಿಂದೆಯೂ ನಾವು ಧಾರವಾಡದ ನುಗ್ಗೇಕೇರಿ ಹನುಮಾನ ದೇವಸ್ಥಾನ ಕುರಿತು ಚರ್ಚಿಸಿದ್ದೇವೆ. ಈ ಭಾಗದ ಬಹಳ ಪ್ರಸಿದ್ಧ ಮಂದಿರ ಇದಾಗಿದ್ದು ಪ್ರತಿದಿನ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಹನುಮನ ವಾರ ಆಗಿರುವ ಶನಿವಾರದಂದು ಭಕ್ತರ ದೊಡ್ಡ ಸಮೂಹ ಇಲ್ಲಿ ನೆರೆಯುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಭೇಟಿ ನೀಡುವ ಜನ ನುಗ್ಗೇಕೇರಿ ಆಂಜನೇಯ ದೇವಸ್ಥಾನಕ್ಕೆ ಹೋಗುವುದನ್ನು ಮರೆಯಲಾರರು. ಈ ಶನಿವಾರ ಹೊಸ ವರ್ಷದ ಮೊದಲ ದಿನವೂ ಆಗಿದ್ದರಿಂದ ಸಹಜವಾಗೇ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವವರ ಮತ್ತು ಹನುಮಂತನ ದರ್ಶನ ಪಡೆಯುವ ಭಕ್ತಾರ್ಥಿಗಳ ಸಂಖ್ಯೆ ದ್ವಿಗುಣಗೊಂಡಿತ್ತು.
ನೂತನ ವರ್ಷದ ಮೊದಲ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿದವರಲ್ಲಿ ಎಲ್ಲ ವಯೋಮಾನದವರಿದ್ದರು. ಹಿರಿಯ ನಾಗರಿಕರು, ಗೃಹಿಣಿಯರು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಮಕ್ಕಳು ಮತ್ತು ಉದ್ಯೋಗಸ್ಥರು ಮೊದಲಾದವರೆಲ್ಲ ಸಾಲಲ್ಲಿ ನಿಂತು ಆಂಜನೇಯನ ದರ್ಶನ ಪಡೆದರು.
ಸಾಮಾನ್ಯವಾಗಿ ಹೊಸ ವರ್ಷದ ಮೊದಲ ದಿನದಂದು ಜನ ತಮ್ಮ ತಮ್ಮ ನಂಬಿಕೆಯ ದೇವಸ್ಥಾನಗಳಿಗೆ ಹೋಗಿ ದೇವರ ಸನ್ನಿಧಾನದಲ್ಲಿ ವಿನೀತರಾಗಿ ನಿಂತು ಕಳೆದ ವರ್ಷವಿಡೀ ಎಲ್ಲ ಅಪಾಯ, ಕೇಡು, ಗಂಡಾಂತರ ಮತ್ತು ಅನಾರೋಗ್ಯಗಳಿಂದ ಪಾರು ಮಾಡಿದ್ದಕ್ಕೆ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಹಾಗೆಯೇ, ಹೊಸ ವರ್ಷದಲ್ಲೂ ಎಲ್ಲ ಸಂಕಷ್ಟಗಳಿಂದ ತಮ್ಮನ್ನು ಕಾಪಾಡುವಂತೆ ಮೊರೆ ಸಲ್ಲಿಸುತ್ತಾರೆ.
ಅಸಲಿಗೆ, ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಆಚರಿಸುವ ರೀತಿಯೇ ಅದು. ನಮ್ಮ ಸಂಸ್ಕೃತಿ ನಮಗೆ ಹಾಗೆ ಹೇಳಿಕೊಟ್ಟಿದೆ, ಹೌದು ತಾನೆ? ಹೊಸ ವರ್ಷವನ್ನು ಸ್ವಾಗತಿಸುವ ನೆಪದಲ್ಲಿ ರಾತ್ರಿಯಿಡೀ ಕಂಠಪೂರ್ತಿ ಕುಡಿದು ಹೊಸ ವರ್ಷದ ಮೊದಲ ದಿನ ಹಾಸಿಗೆಯಲ್ಲಿ ಬಿದ್ದುಕೊಳ್ಳೋದು ಸರ್ವಥಾ ನಮ್ಮ ಸಂಸ್ಕೃತಿ ಅಲ್ಲ. ನಿಮಗೆ ಇದು ಉಪದೇಶದ ಥರ ಭಾಸವಾಗುತ್ತಿರಹುದು ಅದರೆ ವಾಸ್ತವ ಮಾತ್ರ ಇದೇ ಮರಾಯ್ರೇ!
ಇದನ್ನೂ ಓದಿ: ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ