ಗ್ರಾಮದ ನೆತ್ತಿಯ ಮೇಲೆ ಫ್ಲೈ ಓವರ್: ಭಾಗಮಂಡಲ ಜನತೆಯ 4 ವರ್ಷಗಳ ತಲೆನೋವು ಇನ್ನೂ ಕಮ್ಮಿಯಾಗಿಲ್ಲ
Bhagamandal Flyover: ಕೊಡಗು ಜಿಲ್ಲೆಯ ಭಾಗಮಂಡಲ ಜನತೆಯ ನಾಲ್ಕು ವರ್ಷಗಳ ತಲೆ ನೋವು ಇನ್ನೂ ಕಮ್ಮಿಯಾಗಿಲ್ಲ. ಈ ಗ್ರಾಮದ ನೆತ್ತಿಯ ಮೇಲೆ ಹಾದು ಹೋಗುವ ಫ್ಲೈ ಓವರ್ ಇನ್ನೂ ಸಂಪೂರ್ಣವಾಗಿಲ್ಲ. ಹಾಗಾಗಿ ಈ ವರ್ಷವೂ ಈ ಊರಿನ ಜನರಿಗೆ ಪ್ರವಾಹದಲ್ಲಿ ಮುಳುಗುವ ದೌರ್ಭಾಗ್ಯ ಒದಗಿ ಬಂದಿದೆ.
ಕೊಡಗು ಜಿಲ್ಲೆಯ (Kodagu) ಭಾಗಮಂಡಲ ( Bhagamandala) ಜನತೆಯ ನಾಲ್ಕು ವರ್ಷಗಳ ತಲೆ ನೋವು ಇನ್ನೂ ಕಮ್ಮಿಯಾಗಿಲ್ಲ. ಈ ಗ್ರಾಮದ ನೆತ್ತಿಯ ಮೇಲೆ ಹಾದು ಹೋಗುವ ಫ್ಲೈ ಓವರ್ (Flyover) ಇನ್ನೂ ಸಂಪೂರ್ಣವಾಗಿಲ್ಲ. ಹಾಗಾಗಿ ಈ ವರ್ಷವೂ ಈ ಊರಿನ ಜನರಿಗೆ ಪ್ರವಾಹದಲ್ಲಿ ಮುಳುಗುವ ದೌರ್ಭಾಗ್ಯ ಒದಗಿ ಬಂದಿದೆ. ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಶುರುವಾಯ್ತು ಅಂದ್ರೆ ಮೊದಲು ಜಲಾವೃತವಾಗೋದೇ ಈ ಭಾಗಮಂಡಲ ಗ್ರಾಮ. ಒಂದು ರೀತಿಯಲ್ಲಿ ಎಲ್ಲಾ ಬದಿಯ ಸಂಪರ್ಕ ಕಳೆದುಕೊಂಡು ಈ ಗ್ರಾಮ ದ್ವೀಪದಂತಾಗುತ್ತದೆ. ಮಳೆ ಹೆಚ್ಚಾದಾಗ ಇಲ್ಲಿನ ಜನರು ರಸ್ತೆ ದಾಟಲು ದೋಣಿಯ ಮೂಲಕವೇ ಹೋಗಬೇಕಿದೆ. ಹಾಗಾಗಿ ಈ ಗ್ರಾಮಕ್ಕೆ ಫ್ಲೈ ಓವರ್ ನಿರ್ಮಿಸಲು ಈ ಹಿಂದೆಯೇ ಕಾಮಗಾರಿ ಆರಂಭಿಸಲಾಗಿದೆ. ಆದ್ರೆ ಎರಡು ವರ್ಷವಾದ್ರೂ ಫ್ಲೈ ಓವರ್ ಮಾತ್ರ ಸಿದ್ಧವಾಗಿಲ್ಲ. ಭಾಗಮಂಡಲದಾಚೆ ಎಲ್ಲದ್ರೂ ಪ್ರಾಕೃತಿಕ ವಿಕೋಪ ಸಂಭವಿಸಿದ್ರೆ ರಕ್ಷಣಾ ಪಡೆಗಳು ಪ್ರವಾಹ ದಾಟಲೂ ಸಾಧ್ಯವಾಗುವುದಿಲ್ಲ. ಇನ್ನೂ ಕೂಡ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಲೇ ಇದೆ. ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ಕಾವೇರಿ ಜಾತ್ರೆ ನಡೆಯಲಿದೆ. ಅದರ ಮೊದಲು ಮೇಲ್ಸೇತುವೆ ಕಾಮಗಾರಿ ಮುಗಿಸುವುದಾಗಿ ಈ ಹಿಂದೆ ಹೇಳಲಾಗಿತ್ತು. ಆದ್ರೆ ಇದೀಗ ಈ ವರ್ಷವೂ ಈ ಸೇತುವೆ ಸಂಪೂರ್ಣವಾಗುವ ಲಕ್ಷಣಗಳಿಲ್ಲ.
2019ರಿಂದಲೇ ಈ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಆದ್ರೂ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಆಸಕ್ತಿ ತೋರಿಲ್ಲ. ಈ ಯೋಜನೆಗಾಗಿ ಈಗಾಗಲೇ ಭರ್ತಿ 30 ಕೋಟಿ ರೂ ವ್ಯಯಿಸಲಾಗಿದೆ. ಈ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. ಅದೂ ಅಲ್ಲದೆ ಮಳೆಗಾಲದಲ್ಲಿ ಕಾಮಗಾರಿಯಿಂದಾಗಿ ರಸ್ತೆಗಳು ಸಂಪೂರ್ಣ ಹದಗೆಟ್ಟುಹೋಗಿದೆ. ಹಾಗಾಗಿ ಜನತೆ ಇನ್ನಿಲ್ಲದ ಬವಣೆಪಡುವಂತಾಗಿದೆ. ಇದೀಗ ಹೊಸ ಸರ್ಕಾರ ಬಂದಿರುವುದರಿಂದ ಜನರ ನಿರೀಕ್ಷೆಯೂ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ನೂತನ ಉಸ್ತುವಾರಿ ಸಚಿವ ಬೋಸರಾಜು ಅವರು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ
ಇನ್ನ, ನಿಧಾನ ಗತಿಯಲ್ಲಿ ಸಾಗುತ್ತಿರುವ ಈ ಕಾಮಗಾರಿಯ ಕುರಿತು ಸ್ಥಳೀಯ ಶಾಸಕರನ್ನ ಪ್ರಶ್ನಿಸಿದರೆ, ಕಾಮಗಾರಿ ವಿಳಂಬಕ್ಕೆ ಕೊರೊನಾ ಕಾರಣ ಮುಂದಿಟ್ಟಿದ್ದಾರೆ. ಭಾಗಮಂಡಲದಲ್ಲಿ ವರ್ಷಕ್ಕೆ 3000 ಮಿಲಿಮೀಟರ್ ಮಳೆಯಾಗುತ್ತದೆ. ಈ ಸಂದರ್ಭ ಭಾಗಮಂಡಲ ದ್ವೀಪದಂತಾಗುತ್ತದೆ. ಕನಿಷ್ಟ ಮುಂದಿನ ಮಳೆಗಾಲಕ್ಕಾದ್ರೂ ಮೇಲ್ಸೇತುವೆ ಕಾಮಗಾರಿ ಮುಗಿಸಿಕೊಡಿ ಅಂತ ಭಾಗಮಂಡಲ ನಿವಾಸಿಗಳು ಆಗ್ರಹಿಸಿದ್ದಾರೆ.