ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಆರೋಗ್ಯ ಸಚಿವ ಯುಟಿ ಖಾದರ್, ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲಿನ ದಾಳಿ, ಎರಡು ಘಟಕಗಳ ಬಂದ್ ಮತ್ತು ಶೋಕಾಸ್ ನೋಟಿಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಮಂಗಳೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ತಪಾಸಣೆ ತೀವ್ರಗೊಳಿಸಲಾಗುವುದು ಎಂದರು. ಆಹಾರ ಗುಣಮಟ್ಟ, ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸೂಚಿಸಿದ ಅವರು, ಗ್ರಾಹಕರ ದೂರುಗಳಿಗಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಜನಪ್ರಿಯಗೊಳಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು, ಸೆಪ್ಟೆಂಬರ್ 2: ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ನಡೆಸಿದ ದಾಳಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಡೆಸಿದ ತಪಾಸಣೆಯಲ್ಲಿ ಎರಡು ಸಿಹಿ ತಯಾರಿಕಾ ಘಟಕಗಳನ್ನು ಮುಚ್ಚಲಾಗಿದ್ದು, ಉಳಿದ ಘಟಕಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್‌ಗೆ ಉತ್ತರ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ತಪಾಸಣೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸುವ ಉದ್ದೇಶವಿದೆ. ಎಲ್ಲರೂ ಸ್ವಚ್ಛತೆ, ಗುಣಮಟ್ಟ ಮತ್ತು ಆಹಾರದ ಶುದ್ಧತೆಯನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ದಾಳಿ ವೇಳೆ ಸಿಕ್ಕಿಬಿದ್ದ ನಂತರ ಕಾಪಾಡುವಂತೆ ಕೇಳಿಕೊಂಡರೆ ನನ್ನಿಂದ ನಯಾಪೈಸೆ ಉಪಕಾರ ಸಿಗಲ್ಲ. ಆಹಾರ ತಿನ್ನುವವರ ಆರೋಗ್ಯವೇ ನಮಗೆ ಮುಖ್ಯ ಎಂದು ಅವರು ಹೇಳಿದರು.
ಯಾವುದೇ ರೀತಿಯ ಕಲಬೆರಕೆ ಇಲ್ಲದೆ ಉತ್ತಮ ಆಹಾರ ಒದಗಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ಗ್ರಾಹಕರ ದೂರುಗಳಿಗಾಗಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಸಮಸ್ಯೆಗಳನ್ನು ಅಧಿಕಾರಿಗಳಿಗೆ ನೇರವಾಗಿ ವರದಿ ಮಾಡಲು ಸಾಧ್ಯವಾಗುತ್ತದೆ. ಪಿಜಿ ಮಾಲೀಕರು ಮತ್ತು ಕ್ಯಾಟರಿಂಗ್ ಸೇವೆ ಒದಗಿಸುವವರು ಸಹ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವಂತೆ ಸಚಿವರು ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

