AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

113 ರನ್​ಗಳ ಅಂತರ... ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!

113 ರನ್​ಗಳ ಅಂತರ… ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!

ಝಾಹಿರ್ ಯೂಸುಫ್
|

Updated on: Jun 18, 2025 | 12:56 PM

Share

Washington Freedom vs Los Angeles Knight Riders: ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 8ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾಷಿಂಗ್ಟನ್ ಫ್ರೀಡಂ ತಂಡವು 20 ಓವರ್​ಗಳಲ್ಲಿ 208 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಕೇವಲ 95 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲನುಭವಿಸಿದೆ.

ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 8ನೇ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡವು ಅಮೋಘ ಜಯ ಸಾಧಿಸಿದೆ. ಕ್ಯಾಲಿಫೋರ್ನಿಯಾದ ಒಕ್​ಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ವಾಷಿಂಗ್ಟನ್ ಫ್ರೀಡಂ ಪರ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸ್​ವೆಲ್ ಮೊದಲ 15 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 11 ರನ್​ಗಳು ಮಾತ್ರ. ಆದರೆ ಆ ಬಳಿಕ ಸಿಡಿಲಬ್ಬರ ಶುರು ಮಾಡಿದ ಮ್ಯಾಕ್ಸಿ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಷ್ಟೇ ಅಲ್ಲದೆ 48 ಎಸೆತಗಳಲ್ಲಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.

ಈ ಪಂದ್ಯದಲ್ಲಿ ಕೇವಲ 49 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್​​ವೆಲ್ 13 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 106 ರನ್ ಬಾರಿಸುವ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡದ ಮೊತ್ತವನ್ನು 208 ಕ್ಕೆ ತಂದು ನಿಲ್ಲಿಸಿದರು.

ಈ ಗುರಿಯನ್ನು ಬೆನ್ನತ್ತಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 16.3 ಓವರ್​ಗಳಲ್ಲಿ ಕೇವಲ 95 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ವಾಷಿಂಗ್ಟನ್ ಫ್ರೀಡಂ ತಂಡವು 113 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಕುತೂಹಲಕಾರಿ ವಿಷಯ ಎಂದರೆ ವಾಷಿಂಗ್ಟನ್ ಫ್ರೀಡಂ ಪರ ಮ್ಯಾಕ್ಸಿ ಏಕಾಂಗಿಯಾಗಿ ಕಲೆಹಾಕಿದ ಮೊತ್ತವನ್ನು ಸಹ ದಾಟಲು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪಡೆಗೆ ಸಾಧ್ಯವಾಗಿಲ್ಲ. ಹೀಗಾಗಿಯೇ ಇದೀಗ ಗ್ಲೆನ್ ಮ್ಯಾಕ್ಸ್​ವೆಲ್ ವಿರುದ್ಧ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ 11 ರನ್​ಗಳಿಂದ ಸೋಲು ಎಂದು ಟ್ರೋಲ್ ಮಾಡಲಾಗುತ್ತಿದೆ.