VIDEO: ಗ್ಲೆನ್ ಫಿಲಿಪ್ಸ್ ಇದ್ದಾರೆ ಎಚ್ಚರಿಕೆ..!
IPL 2026 DC vs GT: ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 209 ರನ್ಗಳಿಸಿ ಕೇವಲ ಒಂದು ರನ್ನಿಂದ ಸೋಲೊಪ್ಪಿಕೊಂಡಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವು ಕೇವಲ ರನ್ ರೋಚಕತೆಗೆ ಮಾತ್ರವಲ್ಲದೆ, ಕ್ರೀಡಾಂಗಣದಲ್ಲಿ ಕಂಡುಬಂದ ಅಸಾಧಾರಣ ಫೀಲ್ಡಿಂಗ್ ಸಾಹಸಕ್ಕೂ ಸಾಕ್ಷಿಯಾಯಿತು. ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಗ್ಲೆನ್ ಫಿಲಿಪ್ಸ್ ಅವರು ಅಸಾಧ್ಯವೆನಿಸುವ ಕ್ಯಾಚ್ ಒಂದನ್ನು ಹಿಡಿಯಲು ಪ್ರಯತ್ನಿಸಿ ಕ್ರಿಕೆಟ್ ಲೋಕವನ್ನು ಬೆರಗುಗೊಳಿಸಿದ್ದಾರೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೇಸಿಂಗ್ ಮಾಡುತ್ತಿದ್ದಾಗ 6ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ವೇಗಿ ಅಶೋಕ್ ಶರ್ಮಾ ಎಸೆದ ಚೆಂಡನ್ನು ಡೆಲ್ಲಿ ಓಪನರ್ ಕೆ.ಎಲ್. ರಾಹುಲ್ ಜೋರಾಗಿ ಬಾರಿಸಲು ಪ್ರಯತ್ನಿಸಿದರು. ಆದರೆ ಬ್ಯಾಟ್‌ನ ಅಂಚಿಗೆ ತಗುಲಿದ ಚೆಂಡು ಆಕಾಶಕ್ಕೆ ಚಿಮ್ಮಿತು.
ಚೆಂಡು ಯಾರೂ ಇಲ್ಲದ ‘ನೋ ಮ್ಯಾನ್ಸ್ ಲ್ಯಾಂಡ್’ನಲ್ಲಿ ಬೀಳುವ ಮುನ್ಸೂಚನೆ ಇತ್ತು. ಆದರೆ 30 ಗಜಗಳ ವೃತ್ತದ ಒಳಗಿದ್ದ ಗ್ಲೆನ್ ಫಿಲಿಪ್ಸ್ ಸುಮಾರು 20-25 ಮೀಟರ್‌ಗಳಷ್ಟು ಹಿಂದೆ ಓಡಿ, ಗಾಳಿಯಲ್ಲಿ ಅಡ್ಡಲಾಗಿ ಹಾರಿ ಚೆಂಡನ್ನು ಹಿಡಿಯಲು ಯತ್ನಿಸಿದರು.
ಫಿಲಿಪ್ಸ್ ಅವರ ಈ ಜಿಗಿತ ಮತ್ತು ಚೆಂಡಿನ ಹಾದಿಯನ್ನು ಗಮನಿಸಿದ ಕಾಮೆಂಟೇಟರ್‌ಗಳು ಮತ್ತು ಅಭಿಮಾನಿಗಳು ಇದನ್ನು “ಶತಮಾನದ ಕ್ಯಾಚ್” ಎಂದು ಬಣ್ಣಿಸಲು ಆರಂಭಿಸಿದ್ದರು. ಆದರೆ ದುರದೃಷ್ಟವಶಾತ್, ಚೆಂಡು ಅವರ ಬೆರಳುಗಳ ತುದಿಗೆ ತಗುಲಿ ಕೆಲವೇ ಇಂಚುಗಳ ಅಂತರದಲ್ಲಿ ನೆಲಕ್ಕೆ ಬಿದ್ದಿತು. ರಾಹುಲ್ ಜೀವದಾನ ಪಡೆದರಾದರೂ, ಫಿಲಿಪ್ಸ್ ಅವರ ಈ ಅಪ್ರತಿಮ ಪ್ರಯತ್ನಕ್ಕೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
ಗ್ಲೆನ್ ಫಿಲಿಪ್ಸ್ ಅವರ ಈ ಅದ್ಭುತ ಪ್ರಯತ್ನವನ್ನು ಇದೀಗ ‘ಗ್ಲೆನ್ ಫಿಲಿಪ್ಸ್ ಇದ್ದಾರೆ ಬ್ಯಾಟ್ಸ್ಮನ್ಗಳೇ ಎಚ್ಚರಿಕೆ!’ ಎಂಬ ಟ್ಯಾಗ್ಲೈನ್ ಮೂಲಕ ಹಾಡಿ ಹೊಗಳಲಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 209 ರನ್ಗಳಿಸಿ ಕೇವಲ ಒಂದು ರನ್ನಿಂದ ಸೋಲೊಪ್ಪಿಕೊಂಡಿದೆ.

