AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಮರ್ಥ ಗೃಹ ಸಚಿವರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ, ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕು: ಡಿಕೆ ಶಿವಕುಮಾರ್

ಅಸಮರ್ಥ ಗೃಹ ಸಚಿವರಿಂದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ, ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕು: ಡಿಕೆ ಶಿವಕುಮಾರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 23, 2022 | 5:26 PM

Share

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಸರ್ಕಾರವನ್ನು ವಜಾ ಮಾಡುವುದೊಂದೇ ಉಳಿದಿರುವ ಏಕೈಕ ಮಾರ್ಗ ಎಂದು ಶಿವಕುಮಾರ್ ಕೆಂಡ ಕಾರಿದರು.

ಬುಧವಾರದಂದು ತುಮಕೂರು ಜಿಲ್ಲೆ ಪ್ರವಾಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಶಿವಮೊಗ್ಗದಲ್ಲಿ ರವಿವಾರ ನಡೆದ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಗೆ ರಾಜ್ಯದ ಗೃಹ ಸಚಿವರ ಅಸಾಮರ್ಥ್ಯ ಮತ್ತು ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯೇ ಕಾರಣ, ಹಾಗಾಗಿ ಗೃಹ ಮಂತ್ರಿ (home minister) ಅರಗ ಜ್ಞಾನೇಂದ್ರ (Araga Jnanendra) ರಾಜೀನಾಮೆ ನೀಡಬೇಕು ಮತ್ತು ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸಬೇಕು ಎಂದು ಹೇಳಿದರು. ಶಿವಮೊಗ್ಗದ ಪೊಲೀಸ್ ಅಧಿಕಾರಿಯ ವಿರುದ್ಧ ತನಿಖೆ ನಡೆಸಬೇಕಿದೆ ಅಂತ ಗೃಹ ಸಚಿವರು ಹೇಳಿದ್ದು ಇಲಾಖೆ ಅಸಮರ್ಥವಾಗಿದೆ ಅಂತ ಒಪ್ಪಿಕೊಂಡಾಯಿತು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಅವರು ವ್ಯಂಗ್ಯವಾಡಿದರು. ಸಂಪುಟದ ಮತ್ತೊಬ್ಬ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರು ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ಏಜೆನ್ಸಿ ಯಿಂದ (ಎನ್ ಐ ಎ) ಆಗಬೇಕು ಅನ್ನುತ್ತಾರೆ. ಅಲ್ಲಿಗೆ ಅವರು ಸಹ ನಮ್ಮ ಪೊಲೀಸ್ ಇಲಾಖೆ ಅಸಮರ್ಥವಾಗಿದೆ, ನಿಷ್ಪ್ರಯೋಜಕವಾಗಿದೆ ಅಂತ ಒಪ್ಪಿಕೊಂಡಂತಾಯಿತು. ಮುಖ್ಯಮಂತ್ರಿಗಳು ಇವರಿಬ್ಬರನ್ನು ಸಂಪುಟದಿಂದ ಕಿತ್ತೊಗೆಯಬೇಕು ಮತ್ತು ರಾಜ್ಯಪಾಲರು ಸರ್ಕಾರವನ್ನೇ ಡಿಸ್ಮಿಸ್ ಮಾಡಬೇಕು ಎಂದು ಶಿವಕುಮಾರ್ ಹೇಳಿದರು.

ಐದು ವರ್ಷಗಳಿಂದ ಹರ್ಷ ಮತ್ತು ಆರೋಪಿಗಳ ನಡುವೆ ವೈರತ್ವವಿತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ನಿಷ್ಕ್ರಿಯವಾಗಿತ್ತು ಎಂದು ಆರೋಪ ಮಾಡುತ್ತಿರುವ ಬಿಜೆಪಿ ಸರ್ಕಾರದ ಮಂತ್ರಿಗಳು ಜನರ ಗಮನ ಬೇರೆಡೆ ತಿರುಗಿಸಲು ಹಾಗೆ ಹೇಳುತ್ತಿದ್ದಾರೆ. ಹಾಗಾದರೆ ಈ ಸರ್ಕಾರವೇನು ಮಾಡುತ್ತಿದೆ? ರಾಜ್ಯದ ಗೃಹ ಸಚಿವರೇ ಪೊಲೀಸ್ ಅಧಿಕಾರಿಯ ವಿರುದ್ಧ ತನಿಖೆ ನಡೆಸಬೇಕು ಅಂತ ಹೇಳುತ್ತಾರೆಂದರೆ, ಅದು ಇಲಾಖೆಯ ಅಯೋಗ್ಯತೆ ಮತ್ತು ಅಸಾಮರ್ಥ್ಯವನ್ನು ತೋರುತ್ತದೆ ಎಂದು ಶಿವಕುಮಾರ್  ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಸರ್ಕಾರವನ್ನು ವಜಾ ಮಾಡುವುದೊಂದೇ ಉಳಿದಿರುವ ಏಕೈಕ ಮಾರ್ಗ ಎಂದು ಶಿವಕುಮಾರ್ ಕೆಂಡ ಕಾರಿದರು.

ಇದನ್ನೂ ಓದಿ:   ಶಿವಮೊಗ್ಗ: ಹತ್ಯೆಗೂ ಮುನ್ನ ಹರ್ಷನಿಗೆ ಬಂದಿತ್ತು ಇಬ್ಬರು ಹುಡುಗಿಯರ ವಿಡಿಯೋ ಕಾಲ್, ಅದೇ ಮುಳುವಾಯಿತಾ?