ಸಿದ್ದರಾಮಯ್ಯನವರನ್ನು ಸೋಲಿಸಿದ್ದ ಜಿಟಿ ದೇವೇಗೌಡರಿಗೆ ಅವರಂತೆ ಕುಣಿಯುವುದೂ ಗೊತ್ತು!
ದೇವಸ್ಥಾನದ ಮುಂದೆ ಯುವಕರ ಗುಂಪು ತಮ್ಮಟೆ ಸದ್ದಿಗೆ ಕುಣಿಯುತ್ತಿರುವುದನ್ನು ಕಂಡು ಅವರೊಳಗಿನ ನೃತ್ಯಪಟು ಜಾಗೃತಗೊಂಡಿದ್ದಾನೆ. ಅವರಿಗೆ ತಮ್ಮ ಯೌವನದ ದಿನಗಳು ನೆನಪಾಗಿರಲಿಕ್ಕೂ ಸಾಕು. ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಕುಣಿಯಲಾರಂಭಿಸಿದ್ದಾರೆ.
ಮೈಸೂರು: ಮೈಸೂರು ಭಾಗದ ನಾಯಕರು ಯಾವುದೇ ಪಕ್ಷದವರಾಗಿರಲಿ, ಕುಣಿತದಲ್ಲಿ ನಿಸ್ಸೀಮರು ಅಂತ ಕಾಣುತ್ತೆ ಮಾರಾಯ್ರೇ. ನಾವು ಹೀಗೆ ಹೇಳೋದಿಕ್ಕೆ ಕಾರಣವಿದೆ. ಇಲ್ಲೊಂದು ಗುಂಪು ಕುಣಿತದಲ್ಲಿ ಮಗ್ನವಾಗಿದೆ. ಗುಂಪಿನಲ್ಲಿ ಒಬ್ಬ ಗಣ್ಯರಿದ್ದಾರೆ. ಬಿಳಿ ಅಂಗಿ, ಬಿಳಿ ಪಂಚೆ ಮತ್ತು ಅದೇ ಬಣ್ಣದ ಅಂಗವಸ್ತ್ರ. ಹೌದು, ಅವರು ಮಾಜಿ ಸಚಿವ ಮತ್ತು ಜೆಡಿ(ಎಸ್) ಹಾಲಿ ಶಾಸಕ ಜಿಟಿ ದೇವೇಗೌಡ (GT Devegowda). ಅವರು ಹೆಚ್ ಡಿ ದೇವೇಗೌಡರ (HD Devegowda) ಪಕ್ಷದ ಶಾಸಕರಾಗಿರುವುದು ನಿಜವಾದರೂ ಅದರಿಂದ ವಿಮುಖರಾಗಿದ್ದಾರೆ. ಅವರು ಇಷ್ಟರಲ್ಲೇ ಕಾಂಗ್ರೆಸ್ (Congress) ಪಕ್ಷ ಸೇರುವ ವದಂತಿಗಳು ದಟ್ಟವಾಗಿವೆ. ಅದನ್ನು ಆಮೇಲೆ ಚರ್ಚಿಸೋಣ, ಮೊದಲು ಕುಣಿತದ ವಿಷಯಕ್ಕೆ ಬರೋಣ. ನಾವು ಜಿಟಿ ದೇವೇಗೌಡರನ್ನು ಜಿಟಿಡಿ ಎಂದು ಸಂಬೋಧಿಸೋಣ. ಓಕೆ ಜಿಟಿಡಿ ಚಾಮುಂಡೇಶ್ವರಿ ಕ್ಷೇತ್ರದ ಹೊಸಕಾಮನ ಕೊಪ್ಪಲಿನಲ್ಲಿ ಶುಕ್ರವಾರ ಶ್ರೀಲಕ್ಷ್ಮಿದೇವಿ ದೇವಸ್ಥಾನಕ್ಕೆ ಬಂದಿದ್ದಾರೆ. ಇಲ್ಲಿ ಉತ್ಸವ ಅಥವಾ ಜಾತ್ರೆ ನಡೆದಿರಬಹುದು ಅನಿಸುತ್ತೆ.
ದೇವಸ್ಥಾನದ ಮುಂದೆ ಯುವಕರ ಗುಂಪು ತಮ್ಮಟೆ ಸದ್ದಿಗೆ ಕುಣಿಯುತ್ತಿರುವುದನ್ನು ಕಂಡು ಅವರೊಳಗಿನ ನೃತ್ಯಪಟು ಜಾಗೃತಗೊಂಡಿದ್ದಾನೆ. ಅವರಿಗೆ ತಮ್ಮ ಯೌವನದ ದಿನಗಳು ನೆನಪಾಗಿರಲಿಕ್ಕೂ ಸಾಕು. ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಕುಣಿಯಲಾರಂಭಿಸಿದ್ದಾರೆ. ಶಾಸಕರು ತಮ್ಮೊಂದಿಗೆ ಕುಣಿಯುವಾಗ ಯುವಕರಿಗೆ ಜೋಷ್ ಬಾರದಿರುತ್ತದೆಯೇ? ಝಕ್ ನಕಾ ಝಕ್ ನಕಾ ಝಕ್ ನಕಾ ಝಕ್ ನಕಾ ಕುಣಿದಿದ್ದೇ ಕುಣಿದಿದ್ದು.
ಜಿಟಿಡಿಗೆ ಈಗ 72 ರ ಪ್ರಾಯ ಮಾರಾಯ್ರೇ. ಆದರೆ ತಮಗಿಂತ 50 ವರ್ಷಗಳಷ್ಟು ಚಿಕ್ಕವರಾಗಿರಬಹುದಾದ ಯುವಕರೊಂದಿಗೆ ಸರಿಸಾಟಿಯಾಗಿ ಕುಣಿದಿದ್ದಾರೆ. ಕೆಲ ವಾರಗಳ ಹಿಂದೆ ಇದೇ ಮೈಸೂರು ಜಿಲ್ಲೆಯ ಸಿದ್ದರಾಮನ ಹುಂಡಿ ಗ್ರಾಮದ ಜಾತ್ರೆಯಲ್ಲಿ ಇಲ್ಲಿಯವರೇ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೀರಗಾಸೆ ಕುಣಿತಕ್ಕೆ ಹೆಜ್ಜೆ ಹಾಕಿದ್ದರು.
ಜಿಟಿಡಿ ಜೈಂಟ್ ಕಿಲ್ಲರ್ ಮಾರಾಯ್ರೇ. ಕಳೆದಬಾರಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹೆವಿವೇಟ್ ಮತ್ತು ಸುಲಭವಾಗಿ ಗೆಲ್ಲುತ್ತಾರೆಂದು ಭಾವಿಸಲಾಗಿದ್ದ ಸಿದ್ದರಾಮಯ್ಯನವರನ್ನು ಸೋಲಿಸಿದ್ದರು. ಈಗ ಅವರು ಅದೇ ಕಾಂಗ್ರೆಸ್ ಪಕ್ಷವನ್ನು ಸೇರುವ ತವಕದಲ್ಲಿದ್ದಾರೆ. ಆದರೆ ಅವರದ್ದೊಂದು ಷರತ್ತಿದೆ, ಅವರ ಮಗ ಹರೀಷ್ ಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು. ಏನಾಗುತ್ತೋ ಕಾದು ನೋಡಬೇಕು.
ಇದನ್ನೂ ಓದಿ: ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್: ಅಪ್ಪನ ಡಾನ್ಸ್ ನೋಡಿ ಮಗನಿಗೆ ಖುಷಿ