ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್: ಅಪ್ಪನ ಡಾನ್ಸ್ ನೋಡಿ ಮಗನಿಗೆ ಖುಷಿ

ಊರ ಜಾತ್ರೆಯಲ್ಲಿ ಸಿದ್ದರಾಮಯ್ಯ ಸಖತ್ ಸ್ಟೆಪ್: ಅಪ್ಪನ ಡಾನ್ಸ್ ನೋಡಿ ಮಗನಿಗೆ ಖುಷಿ
ಜಾತ್ರೆಯಲ್ಲಿ ಕುಣಿದ ಸಿದ್ದರಾಮಯ್ಯ

ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಅವರು, ಸುಮಾರು 40 ನಿಮಿಷ ತಮ್ಮ ಸ್ನೇಹಿತರು ಹಾಗೂ ಬೆಂಬಲಿಗರ ಜೊತೆ ಕುಣಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 25, 2022 | 9:51 AM


ಮೈಸೂರು: ನಮ್ಮೂರಿನ ಜಾತ್ರೆಗೆ ನಾನು ಎಂದಿಗೂ ತಪ್ಪಿಸಿಕೊಂಡಿಲ್ಲ. ನಾನು ಮೂಲತಃ ಇದೇ ಊರಿನವನು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮನಹುಂಡಿಯಲ್ಲಿ ಚಿಕ್ಕಮ್ಮ ತಾಯಿ ಜಾತ್ರೆಯಲ್ಲಿ ಪಾಲ್ಗೊಂಡು, ಪೂಜೆಯ ನಂತರ ಮಾತನಾಡಿದ ಅವರು, ಊರಿನೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕ ಇರಿಸಿಕೊಂಡಿದ್ದೇನೆ. ಜಾತ್ರೆಯಲ್ಲಿ ಪಾಲ್ಗೊಳ್ಲುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಹಿಂದೆ ಸಚಿವನಾಗಿದ್ದಾಗಲೂ ಬಂದಿದ್ದೆ, ಮುಖ್ಯಮಂತ್ರಿಯಾಗಿದ್ದಾಗಲೂ ಬಂದಿದ್ದೆ, ಈಗಲೂ ಬಂದಿದ್ದೇನೆ. ಹಿಂದೆ ಎರಡು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತಿತ್ತು. ಬಳಿಕ ಮೂರು ವರ್ಷಗಳಿಗೊಮ್ಮೆ ಆಯ್ತು. ಕೋವಿಡ್ ಬಂದಿದ್ದ ಕಾರಣ ಕಳೆದ ವರ್ಷ ಹಬ್ಬ ಮಾಡಿರಲಿಲ್ಲ. ಈ ವರ್ಷ ಮಾಡ್ತಿದ್ದೇವೆ. ಜಾತ್ರೆಗೆ ಬೇರೆ ಕಡೆಯಿಂದೆಲ್ಲಾ ನೆಂಟರಿಷ್ಟರು, ಗೆಳೆಯರು ಬಂದಿರುತ್ತಾರೆ. ಊರಿಗೆ ಬಂದು ಹೋಗೋದೇ ಖುಷಿ ಎಂದರು.

ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು, ಬೆಂಬಲಿಗರ ಜತೆ ಸುಮಾರು 40 ನಿಮಿಷ ಕುಣಿದರು. ಮನೆಯಿಂದ ಕಾಲುನಡಿಗೆಯಲ್ಲಿಯೇ ದೇವಸ್ಥಾನಕ್ಕೆ ಆಗಮಿಸಿದ ಸಿದ್ದರಾಮಯ್ಯ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯನ ಹುಂಡಿಯಲ್ಲಿ ಜಾತ್ರೆ ಎರಡು ದಿನ ನಡೆಯುತ್ತದೆ. ಜಾತ್ರೆಯಲ್ಲಿ ಕೆಲ ಬೆಂಬಲಿಗರು ‘ಮುಂದಿನ ಸಿಎಂ ಸಿದ್ದರಾಮಯ್ಯ’ ಎಂದು ಘೋಷಣೆಗಳನ್ನು ಕೂಗಿದರು.

‘ಬಂದಾನಪ್ಪೋ ಬಂದಾನು, ಸಿದ್ದರಾಮಯ್ಯ ಬಂದಾನು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಗ್ರಾಮಸ್ಥರು ಘೋಷಣೆ ಮೊಳಗಿಸಿದರು. ಹುಟ್ಟೂರಲ್ಲಿ ಸಿದ್ದರಾಮಯ್ಯಗೆ ಬಹುಪರಾಕ್ ಹೇಳಿದರು. ಗ್ರಾಮಸ್ಥರೊಬ್ಬರು ಸಿದ್ದರಾಮಯ್ಯ ಕಾಲಿಗೆ ಬಿದ್ದರು. ಏ ಯಾರಪ್ಪ ನೀನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ತಕ್ಷಣ ಆತನನ್ನು ಪೊಲೀಸರು ಪಕ್ಕಕ್ಕೆ ಸರಿಸಿದರು.

ಜಾತ್ರೆಯಲ್ಲಿ ಸಿದ್ದರಾಮಯ್ಯ ತುಂಬಾ ಖುಷಿಯಾಗಿ ಡಾನ್ಸ್ ಮಾಡಿದರು. ಜಾನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಅವರು, ಸುಮಾರು 40 ನಿಮಿಷ ತಮ್ಮ ಸ್ನೇಹಿತರು ಹಾಗೂ ಬೆಂಬಲಿಗರ ಜೊತೆ ಕುಣಿದರು. ಸಿದ್ದರಾಮಯ್ಯ ಅವರು ಜಾತ್ರೆಯಲ್ಲಿ ಕುಣಿದು ಸುಮಾರು 15 ವರ್ಷಗಳೇ ಆಗಿತ್ತು. ಉಪಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಕುಣಿದಿದ್ದೇ ಕೊನೆಯದು. ನಂತರ ಕುಣಿಯಲಿಲ್ಲ. ನೆಚ್ಚಿನ ನಾಯಕನ ಕುಣಿತ ನೋಡಲು ಗ್ರಾಮಸ್ಥರು ಮುಗಿಬಿದ್ದರು. ತಳ್ಳಾಟ ನೂಕಾಟದ ನಡುವೆಯೇ ಸಿದ್ದರಾಮಯ್ಯ ಬಿಂದಾಸ್ ಆಗಿ ಹೆಜ್ಜೆ ಹಾಕಿದರು.

ಅಪ್ಪನ ಕುಣಿತ ನೋಡಿ ಖುಷಿಪಟ್ಟ ಮಗ ಡಾ.ಯತೀಂದ್ರ, ‘ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡೋದು ವಾಡಿಕೆ. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅಪ್ಪ ಮೊದಲೇ ಹೇಳಿದ್ದರು ನಾನು ಡ್ಯಾನ್ಸ್ ಮಾಡಲ್ಲ ಅಂತ. ಆದರೆ ಜನರ ನೋಡಿ ಉತ್ಸಾಹ ಬಂದು ಅವರು ಸಹ ಹೋಗಿ ಡ್ಯಾನ್ಸ್ ಮಾಡಿದರು. ಅಪ್ಪ ಸ್ಕೂಲ್ ಬಿಟ್ಟು ವೀರನ ಕುಣಿತ ಕಲಿತಿದ್ದರು. ಈಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ. ನನಗೆ ಈ ರೀತಿ ಕುಣಿಯೋಕೆ ಚಿಕ್ಕಂದಿನಿಂದಲೂ ಬಿಡಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: The Kashmir Files: ಕಾಶ್ಮೀರ್ ಫೈಲ್ಸ್ ಬಗ್ಗೆ ಹೊಸ ಚರ್ಚೆ- ಸಿದ್ದರಾಮಯ್ಯ ಮತ್ತು ಡಿಕೆಶಿ ಓದಲೇಬೇಕಾದ ಅಂಶಗಳು ಇಲ್ಲಿವೆ ನೋಡಿ

ಇದನ್ನೂ ಓದಿ: ನಿಮ್ಮ ಪೊಲೀಸರು ಲಂಚ ತೆಗೆದುಕೊಂಡು ನಾಯಿಗಳಂತೆ ಬಿದ್ದಿದ್ದಾರೆ ಅಂತ ಜ್ಞಾನೇಂದ್ರ ಒಬ್ಬ ಹಿರಿಯ ಅಧಿಕಾರಿಗೆ ಬೈದಿದ್ದರು: ಸಿದ್ದರಾಮಯ್ಯ

Follow us on

Related Stories

Most Read Stories

Click on your DTH Provider to Add TV9 Kannada