ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಬಗ್ಗೆ ದೇಗುಲದ ಅರ್ಚಕ ನಾಗರಾಜ್ ಹೇಳಿದ್ದೇನು?
ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನದಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ದೇಗುಲದ ಪ್ರಧಾನ ಅರ್ಚಕ ನಾಗರಾಜ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ದೇವಿಗೆ ವಿಸರ್ಜನೆ ಪೂಜೆ ನೆರವೇರಿಸಿ, ಜಿಲ್ಲಾಡಳಿತದ ಸಮ್ಮುಖದಲ್ಲಿ ಗರ್ಭಗುಡಿ ತಪಾಸಣೆ ಮಾಡಿ ಬೀಗ ಮುದ್ರೆ ಹಾಕಲಾಗುತ್ತದೆ. ಭಕ್ತರ ಸಹಕಾರಕ್ಕೆ ಅರ್ಚಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹಾಸನ, ನವೆಂಬರ್ 11: ಹಾಸನಾಂಬೆ ದರ್ಶನೋತ್ಸವ ಕೊನೆಯ ಹಂತಕ್ಕೆ ತಲುಪಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಈ ಕುರಿತು ದೇಗುಲದ ಪ್ರಧಾನ ಅರ್ಚಕ ನಾಗರಾಜ್ ಅವರು ವಿವರಣೆ ನೀಡಿದ್ದಾರೆ.
ಪ್ರತಿ ವರ್ಷದಂತೆ ಪ್ರಾಚೀನ ವಿಧಿವಿಧಾನಗಳ ಪ್ರಕಾರ ದೇವಿಯ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಮೊದಲ ದಿನ ದೇವಿಗೆ ಶುದ್ಧಿ ಕಾರ್ಯ ನಡೆಸಿ ವಸ್ತ್ರಾಭರಣಗಳನ್ನು ಸಮರ್ಪಿಸಲಾಗಿತ್ತು. ಕೊನೆಯ ದಿನವಾದ ಇಂದು ಆ ವಸ್ತ್ರಾಭರಣಗಳನ್ನು ವಿಸರ್ಜನೆ ಮಾಡಿ, ಮತ್ತೆ ಶುದ್ಧಿ ಕಾರ್ಯಗಳನ್ನು ನಡೆಸಿ ಪೂಜೆ ಸಲ್ಲಿಸಲಾಯಿತು. ಮುಂದಿನ ವರ್ಷದವರೆಗೂ ಎಲ್ಲರನ್ನೂ ಕಾಪಾಡಮ್ಮ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಈ ವಿಧಿವಿಧಾನಗಳ ನಂತರ, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಖಜಾನೆ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯನ್ನು ತಪಾಸಣೆ ಮಾಡಿಸಿ ವಿಧ್ಯುಕ್ತವಾಗಿ ಬೀಗ ಮುದ್ರೆ ಹಾಕಲಾಯಿತು. ಈ ವರ್ಷ ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದಿದ್ದು, ಭಕ್ತರ ಸಹಕಾರಕ್ಕೆ ಅರ್ಚಕರು ಸಂತಸ ವ್ಯಕ್ತಪಡಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
