ಹಾಸನದ ಹಾಸನಾಂಬೆ ದೇವಸ್ಥಾನ ಹತ್ತು ದಿನಗಳ ಉತ್ಸವದ ನಂತರ ಶನಿವಾರ ಮುಚ್ಚಲಾಯಿತು, ದೇವಿ ದರ್ಶನ ಇನ್ನು ಮುಂದಿನ ವರ್ಷವೇ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 06, 2021 | 11:47 PM

ಒಮ್ಮೆ ಗರ್ಭಗುಡಿಯನ್ನು ಮುಚ್ಚಿ ದೇವಸ್ಥಾನದ ಬಾಗಿಲು ಲಾಕ್ ಮಾಡಿದರೆ ಅದನ್ನು ಪುನಃ ಓಪನ್ ಮಾಡೋದು ಒಂದು ವರ್ಷದ ನಂತರವೇ

ಕೊರೋನಾ ಭೀತಿಯ ನಡುವೆಯೂ ಶ್ರದ್ಧೆ ಮತ್ತು ಭಕ್ತಿಯಿಂದ 10 ದಿನಗಳ ಕಾಲ ನಡೆದ ಹಾಸನದ ಹಾಸನಾಂಬೆ ದರ್ಶನೋತ್ಸವ ಶನಿವಾರದಂದು ಸಂಪನ್ನಗೊಂಡಿತು. ವರ್ಷದಲ್ಲಿ ಕೇವಲ ಈ 10 ದಿನಗಳು ಮಾತ್ರ ದೇವಸ್ಥಾನ ತೆಗೆಯಲ್ಪಟ್ಟು ಶಕ್ತಿದೇವತೆ ಹಾಸನಾಂಬೆದ ದರ್ಶನ ಭಾಗ್ಯ ಭಕ್ತರಿಗೆ ಲಭ್ಯವಾಗುತ್ತದೆ. ನಿಮಗೆ ಗೊತ್ತಿರುವ ಹಾಗೆ ಅಕ್ಟೋಬರ್ 28 ರಂದು ದೇಗುಲದ ಬಾಗಿಲನ್ನು ತೆರೆಯಲಾಗಿತ್ತು. ಕಳೆದ 10 ದಿನಗಳಲ್ಲಿ 4 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದರ್ಶನ ಪಡೆದರು. ಕೋವಿಡ್-19 ಪಿಡುಗಿನಿಂದಾಗಿ ಕಳೆದ ವರ್ಷ ದೇವಸ್ಥಾನದ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ದೇವಿಯ ದರ್ಶನಕ್ಕೆ ಈ ವರ್ಷ ಆಗಮಿಸಿದ ಭಕ್ತರ ಸಂಖ್ಯೆ ಹೆಚ್ಚಿತ್ತು.

ಹಾಸನಾಂಬೆ ದೇವಸ್ಥನದ ವೈಶಿಷ್ಟ್ಯತೆಯನ್ನು ನಾವು ಮೊದಲು ಚರ್ಚಿಸಿದ್ದೇವೆ. ಈ ಗುಡಿಯನ್ನು ಮುಚ್ಚುವ ಮೊದಲು ಗರ್ಭಗುಡಿಯಲ್ಲಿ ದೀಪವನ್ನು ಹೊತ್ತಿಸಿಡಲಾಗುತ್ತದೆ. ಒಮ್ಮೆ ಗರ್ಭಗುಡಿಯನ್ನು ಮುಚ್ಚಿ ದೇವಸ್ಥಾನದ ಬಾಗಿಲು ಲಾಕ್ ಮಾಡಿದರೆ ಅದನ್ನು ಪುನಃ ಓಪನ್ ಮಾಡೋದು ಒಂದು ವರ್ಷದ ನಂತರವೇ. ಆದರೆ ವಿಷಯ ಅದಲ್ಲ. ಬಾಗಿಲು ಹಾಕಿ ಸೀಲ್ ಮಾಡುವ ಮುನ್ನ ಹೊತ್ತಿಸಿದ ದೀಪವು ಮರುವರ್ಷ ಬಾಗಿಲು ತೆರೆದಾಗ ಅದು ಉರಿಯುತ್ತಲೇ ಇರುತ್ತದೆ.

ಹಾಸನಾಂಬೆ ದರ್ಶನೋತ್ಸವ ಕೊನೆಯ ದಿನವಾಗಿದ್ದ ಶನಿವಾರ ದೇವಸ್ಥಾನದ ಬಾಗಿಲನ್ನು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಹಾಸನದ ಉಸ್ತುವಾರಿ ಸಚಿವ ಗೋಪಾಲಯ್ಯ ಮತ್ತು ಅವರ ಪತ್ನಿ, ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ಮತ್ತು ಎಸ್ ಪಿ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ 10 ದಿನಗಳ ಉತ್ಸವದಲ್ಲಿ, 16 ಸಚಿವರು, ಹಲವಾವಾರು ಶಾಸಕರು, ಮತ್ತು ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರು ದೇವಿಯ ದರ್ಶನ ಪಡೆದರು.

ಇದನ್ನೂ ಓದಿ:   Shimoga: ಹೆಂಡತಿಯೊಂದಿಗೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗಲೇ ನೇಣಿಗೆ ಶರಣಾದ ಶಿವಮೊಗ್ಗ ಜೈಲಿನ ವಾರ್ಡರ್