ಭಿನ್ನಾಭಿಪ್ರಾಯ ಮರೆತು ಒಂದಾದ ಹಾಸನ ಡಿಸಿ, ಎಸ್‌ಪಿ; ಹಾಸನಾಂಬೆ ಸನ್ನಿಧಿಯಲ್ಲಿ ಸೌಹಾರ್ದದ ಸಂದೇಶ

Edited By:

Updated on: Oct 16, 2026 | 11:29 AM

ಗಣಪತಿ ವಿಸರ್ಜನೆ ವಿಚಾರವಾಗಿ ಉಂಟಾಗಿದ್ದ ಭಿನ್ನಾಭಿಪ್ರಾಯದ ಬಳಿಕ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ಒಟ್ಟಿಗೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹಸ್ತಲಾಘವ, ಕುಶಲೋಪರಿ ಹಾಗೂ ಆತ್ಮೀಯ ಆಲಿಂಗನದ ಮೂಲಕ ಸೌಹಾರ್ದದ ಸಂದೇಶ ನೀಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನಡೆಸಿದ್ದ ಸಭೆಯ ಬಳಿಕ ಇಬ್ಬರೂ ಅಧಿಕಾರಿಗಳು ಸಮನ್ವಯದಿಂದ ದರ್ಶನೋತ್ಸವದ ವ್ಯವಸ್ಥೆಗಳನ್ನು ನಿರ್ವಹಿಸಲು ಮುಂದಾಗಿದ್ದಾರೆ.

ಹಾಸನ, ಅಕ್ಟೋಬರ್ 16: ಇತ್ತೀಚೆಗೆ ವಿವಾದದ ಕಾರಣಕ್ಕೆ ಸುದ್ದಿಯಾಗಿದ್ದ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಇದೀಗ ಭಿನ್ನಾಭಿಪ್ರಾಯ ಮರೆತು ಒಂದಾಗಿ ಕಾಣಿಸಿಕೊಂಡಿದ್ದಾರೆ. ಹಾಸನಾಂಬೆ ದೇವಾಲಯಕ್ಕೆ ಒಟ್ಟಿಗೆ ಭೇಟಿ ನೀಡಿದ ಇಬ್ಬರೂ ಅಧಿಕಾರಿಗಳು ಪೂಜೆ ಸಲ್ಲಿಸಿ, ಪರಸ್ಪರ ಕುಶಲೋಪರಿ ವಿಚಾರಿಸುವ ಮೂಲಕ ಸೌಹಾರ್ದದ ಸಂದೇಶ ನೀಡಿದ್ದಾರೆ. ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ಒಟ್ಟಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಡಿಸಿ, ಎಸ್‌ಪಿಗೆ ಹಾಸನಾಂಬೆ ದರ್ಶನೋತ್ಸವದ ವ್ಯವಸ್ಥೆಗಳು ಹಾಗೂ ಉತ್ಸವದ ಕುರಿತು ಮಾಹಿತಿ ಹಂಚಿಕೊಂಡರು. ಮಂಗಳಾರತಿ ತಟ್ಟೆಗೆ ಕಾಣಿಕೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಎಸ್‌ಪಿ ಹಣ ನೀಡಿದ ಪ್ರಸಂಗವೂ ಗಮನ ಸೆಳೆಯಿತು.

ಹಾಸನಾಂಬೆ ಸನ್ನಿಧಿಯಲ್ಲಿ ಆತ್ಮೀಯತೆ

ದೇವಾಲಯದ ಬಳಿ ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಎಸ್‌ಪಿ ಶುಭನ್ವಿತಾ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಇಬ್ಬರೂ ಅಧಿಕಾರಿಗಳು ಒಟ್ಟಾಗಿರುವ ಸಂದೇಶ ನೀಡಿದರು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಗಮನ ಸೆಳೆದಿದೆ.

ಗಣಪತಿ ವಿಸರ್ಜನೆ ವಿಚಾರವಾಗಿ ಉಂಟಾಗಿದ್ದ ವಿವಾದ

ಗಣಪತಿ ವಿಸರ್ಜನೆ ವಿಚಾರವಾಗಿ ಎಸ್‌ಪಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಲತಾ ಕುಮಾರಿ ನೋಟಿಸ್ ನೀಡಿದ್ದರು. ಈ ಬೆಳವಣಿಗೆಯ ಬಳಿಕ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿತ್ತು. ಇಬ್ಬರು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿತ್ತು. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್‌) ಇಬ್ಬರು ಅಧಿಕಾರಿಗಳ ಸಭೆ ನಡೆಸಿದ್ದರು. ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂಬ ಸಂದೇಶವನ್ನು ನೀಡಿದ್ದ ಸಿಎಸ್‌, ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 16, 2026 11:26 AM
Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More