ಸರ್ವೆ ಇಲಾಖೆ ಅಧಿಕಾರಿಗಳ ಚಳಿ ಬಿಡಿಸಿದ ಹಾಸನ ಡಿಸಿ ಲತಾ ಕುಮಾರಿ !
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸರ್ವೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ತವ್ಯಲೋಪ ಎಸಗಿದ ಇಬ್ಬರು ಸರ್ವೇಯರ್‌ಗಳನ್ನು ಅಮಾನತುಗೊಳಿಸಿದ್ದು, ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಒಂದು ವಾರದೊಳಗೆ ಇತ್ಯರ್ಥಪಡಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಹಾಸನ, ಸೆಪ್ಟೆಂಬರ್ 26: ಜಿಲ್ಲೆಯ ಸಕಲೇಶಪುರದಲ್ಲಿ ನಡೆದ ‘ಪ್ರಜಾಸೇವಾ’ ಆಂದೋಲನದಲ್ಲಿ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರ ಸೂಚನೆಯಂತೆ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಸರ್ವೆ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ 8 ತಾಲೂಕುಗಳ ಎಡಿಎಲ್ಆರ್, ಸೂಪರ್‌ವೈಸರ್‌ಗಳು ಹಾಗೂ ಸಕಲೇಶಪುರದ ಸಿಬ್ಬಂದಿ ಸಭೆಯಲ್ಲಿ ಡಿಸಿ, “ಸಕಲೇಶಪುರದಲ್ಲಿದ್ದಷ್ಟು ದೂರುಗಳು ಎಲ್ಲಿಯೂ ಬಂದಿಲ್ಲ. ಸಭೆ ಮುಗಿದು 5 ದಿನವಾದರೂ ಅರ್ಜಿಗಳ ಮಾಹಿತಿ ಪಡೆಯದಿರುವುದು ನಾಚಿಕೆಗೇಡಿನ ಸಂಗತಿ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯವೈಖರಿ ಸುಧಾರಿಸಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದ ಡಿಸಿ ಲತಾ ಕುಮಾರಿ, ಎಲ್ಲಾ ಬಾಕಿ ಅರ್ಜಿಗಳನ್ನು 1 ವಾರದಲ್ಲಿ ಇತ್ಯರ್ಥಪಡಿಸಬೇಕೆಂದು ಸೂಚಿಸಿದರು. ಅಲ್ಲದೆ, ಕರ್ತವ್ಯಲೋಪ ಎಸಗಿದ ಸಕಲೇಶಪುರದ ಸರ್ವೇಯರ್‌ಗಳಾದ ಮನುಕುಮಾರ್ ಮತ್ತು ಗಿರೀಶ್ ಅವರನ್ನು ಸ್ಥಳದಲ್ಲೇ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
