ವಿಶ್ವದ ಕೆಲ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಭಾರತದ ಲೇಹ್ ಏರ್ಪೋರ್ಟ್ ಸಹ ಸೇರಿದೆ
ಭೂತಾನ ವಿಮಾನ ನಿಲ್ದಾಣದ ವೈಶಿಷ್ಟ್ಯತೆ ಏನು ಗೊತ್ತಾ? ಕೇವಲ 20 ಪೈಲಟ್ಗಳು ಮಾತ್ರ ಹಿಮಾಲಯ ಪರ್ವತಗಳಿಂದ ಆವೃತ್ತವಾಗಿರುವ ಏರ್ ಪೋರ್ಟ್ನಲ್ಲಿ ವಿಮಾನ ಇಳಿಸಲು ಮತ್ತು ಟೇಕಾಫ್ ಮಾಡಲು ಕೇವಲ 20 ಪೈಲಟ್ಗಳು ಮಾತ್ರ ಅರ್ಹತೆ ಹೊಂದಿರುವರಂತೆ!
ಭಾರತವೂ ಸೇರಿದಂತೆ ವಿಶ್ವದ ಕೆಲ ದೇಶಗಳಲ್ಲಿ ಅಪಾಯಕಾರಿ ವಿಮಾನ ನಿಲ್ದಾಣಗಳಿವೆ. ಕೆಲವು ಪರ್ವತಗಳ ನಡುವೆ ಇದ್ದರೆ ಇನ್ನೂ ಕೆಲವು ಸಮುದ್ರ ತೀರಕ್ಕೆ ಹತ್ತಿರದಲ್ಲಿವೆ, ಮತ್ತೂ ಕೆಲವು ಏರ್ಪೋರ್ಟ್ಗಳಲ್ಲಿ ರನ್ ವೇಗಳು ಬಹಳ ಚಿಕ್ಕವು. ನೇಪಾಳದ ತೇನ್ಸಿಂಗ್-ಹಿಲರಿ ವಿಮಾನ ನಿಲ್ದಾಣವನ್ನು ಲುಕ್ಲಾ ಏರ್ಪೋರ್ಟ್ ಅಂತಲೂ ಕರೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದು. ನೆಲಮಟ್ಟದಿಂದ ಸುಮಾರು 9,500 ಅಡಿ ಎತ್ತರ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಸದರಿ ವಿಮಾನ ನಿಲ್ದಾಣದಲ್ಲಿ ಹಿಮ ಸುರಿಯುತ್ತಿರುತ್ತದೆ ಮತ್ತು ಮೈ ಮರಗಟ್ಟುವಷ್ಟು ಚಳಿ ಇರುತ್ತದೆ. ಕೇವಲ ಎಂಟೆದೆಯವರು ಮಾತ್ರ ವಿಮಾನ ನಿಲ್ದಾಣದಲ್ಲಿನ ಚಳಿಯೊಂದಿಗೆ ಏಗಬಲ್ಲರು ಅಂತ ಹೇಳಲಾಗುತ್ತದೆ.
ಸೆಂಟ್ ಮಾರ್ಟೆನ್ ನ ಪ್ರಿನ್ಸೆಸ್ ಜೂಲಿಯಾನಾ ವಿಮಾನ ನಿಲ್ದಾಣದ ರನ್ ವೇ ಸ್ಟ್ರೆಚ್ ಕೇವಲ 7,500 ಅಡಿ ಮಾತ್ರವಿದೆ. ಹಾಗಾಗಿ ಈ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಲ್ಯಾಂಡ್ ಮತ್ತು ಟೇಕಾಫ್ ಮಾಡಲು ಅನುಭವಿ ಪೈಲಟ್ಗಳು ಬೇಕಾಗುತ್ತಾರೆ. ಯಾಕೆಂದರೆ, ರನ್ ವೇ ನ ಪ್ರತಿಯೊಂದು ಅಡಿ ದೂರವನ್ನು ವಿವೇಚನೆ ಮತ್ತು ಚಾಕ್ಯಚಕ್ಯತೆ ಬಳಸಿಕೊಳ್ಳಬೇಕಾಗುತ್ತದೆ. ರನ್ ವೇ ಕೊನೆಗೊಂಡಾಕ್ಷಣ ಕೆಳಮಟ್ಟದಲ್ಲಿ ಹರಿಯು ನೀರಿದೆ.
ಪೋರ್ಚುಗಲ್ನ ಕ್ರಿಸ್ಟಿಯಾನೋ ರೊನಾಲ್ಡೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಾಮಾನ್ಯವಾಗಿ ಮಡೀರಾ ವಿಮಾನ ನಿಲ್ದಾಣ ಅಥವಾ ಫಂಚಲ್ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಇದು ಪೋರ್ಚುಗೀಸ್ ದ್ವೀಪಸಮೂಹ ಮತ್ತು ಮಡೀರಾದ ಸ್ವಾಯತ್ತ ಪ್ರದೇಶದಲ್ಲಿರುವ ಸಾಂಟಾ ಕ್ರೂಜ್‌ನ ನಾಗರಿಕ ಪಾರಿಷ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಅಟ್ಲಾಂಟಿಕ್ ಮಹಾಸಾಗರಕ್ಕೆ ಅಂಟಿಕೊಂಡಿರುವ ಈ ವಿಮಾನ ನಿಲ್ದಾಣದಲ್ಲಿ ಬಹಳ ರಭಸದಿಂದ ಗಾಳಿ ಬೀಸುತ್ತಿರುತ್ತದೆ. ರನ್ ವೇಯನ್ನು ಸಾಗರದ ತೀರ ಹತ್ತಿರಕ್ಕೆ ವಿಸ್ತರಿಸಿರುವುದರಿಂದ ಅಟ್ಲಾಂಟಿಕ್ ಮಾರುತಗಳ ವೈಪ್ಯರೀತ್ಯಗಳಿಗೆ ಒಳಗಾಗುತ್ತದೆ.
ವಾಶಿಂಗ್ಟನಲ್ಲಿರುವ ರೊನಾಲ್ಡ ರೇಗನ್ ನ್ಯಾಶನಲ್ ಏರ್ಪೋರ್ಟ್ ನಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡುವಾಗ ಪೈಲಟ್ಗಳು ಪೆಂಟಗನ್ ಮತ್ತು ವೈಟ್ ಹೌಸ್ ಸೇರಿದಂತೆ ಗಗನಚುಂಬಿ ಕಟ್ಟಡಗಳಿಗೆ ವಿಮಾನ ಸ್ಪರ್ಶಿಸಿದಂತಿರಲು ಅಂಕುಡೊಂಕಾದ ರೀತಿಯಲ್ಲಿ ಹಾರಿಸುತ್ತಾ ಭೂಸ್ಪರ್ಶ ಮಾಡಿಸುವ ಅಗತ್ಯವಿರುತ್ತದೆ. ಅಂತೆಯೇ, ವಿಮಾನಗಳು ರೇಗನ್ ವಿಮಾನ ನಿಲ್ದಾಣದಿಂದ ಟೇಕಾಫ್ ಮಾಡುವಾಗ ವಾಷಿಂಗ್ಟನ್ ಸ್ಮಾರಕ ಮತ್ತು ಶ್ವೇತಭವನವನ್ನು ತಪ್ಪಿಸಲು ನಿರ್ಗಮನದ ಕೆಲವೇ ಸೆಕೆಂಡುಗಳ ನಂತರ ತೀಕ್ಷ್ಣವಾದ ತಿರುವು ತೆಗೆದುಕೊಳ್ಳಬೇಕಾಗುತ್ತದೆ.
ನಮ್ಮ ನೆರೆರಾಷ್ಟ್ರ ಭೂತಾನ ವಿಮಾನ ನಿಲ್ದಾಣದ ವೈಶಿಷ್ಟ್ಯತೆ ಏನು ಗೊತ್ತಾ? ಕೇವಲ 20 ಪೈಲಟ್ಗಳು ಮಾತ್ರ ಹಿಮಾಲಯ ಪರ್ವತಗಳಿಂದ ಆವೃತ್ತವಾಗಿರುವ ಏರ್ ಪೋರ್ಟ್ನಲ್ಲಿ ವಿಮಾನ ಇಳಿಸಲು ಮತ್ತು ಟೇಕಾಫ್ ಮಾಡಲು ಕೇವಲ 20 ಪೈಲಟ್ಗಳು ಮಾತ್ರ ಅರ್ಹತೆ ಹೊಂದಿರುವರಂತೆ! ವಿಮಾನ ರೆಕ್ಕೆಯ ಅಂಚು ಪರ್ವತದ ತುದಿಗಳಿಗೆ ತಾಕುವ ಅಪಾಯವಿರುತ್ತದೆ. ಹಾಗಾದಲ್ಲಿ ವಿಮಾನ ಢಮಾರ್!!
ಕೇಂದ್ರಾಳಿತ ಪ್ರದೇಶ ಲಡಾಖ್ ರಾಜಧಾನಿ ಲೇಹ್ ನಲ್ಲಿರುವ ಕೌಶೊಕ್ ಬಕುಲಾ ರಿಂಪೋಚೀ ವಿಮಾನ ನಿಲ್ದಾಣದ ರನ್ ವೇ ಬಹಳ ಚಿಕ್ಕದು. ಇಲ್ಲಿ ಕೇವಲ ಬೆಳಗಿನ ಸಮಯದಲ್ಲಿ ಮಾತ್ರ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಾಧ್ಯ ಅಂತ ಹೇಳುತ್ತಾರೆ.
ಇದನ್ನೂ ಓದಿ: ಲ್ಯಾಂಡ್ ಆಗುವ ಮುನ್ನ ವಿಮಾನದ ವಿಂಡ್ಸ್ಕ್ರೀನ್ಗೆ ಡಿಕ್ಕಿ ಹೊಡೆದ ಪಕ್ಷಿಗಳ ಹಿಂಡು; ಬೆಂಕಿ ಕಿಡಿ ಹೊತ್ತಿದ ವಿಡಿಯೋ ವೈರಲ್