ಹಾವೇರಿ ಅಪಘಾತ: ತಿಂಗಳ ಹಿಂದೆ ಟಿಟಿ ಖರೀದಿ, ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ

ಬ್ಯಾಡಗಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಅಚ್ಚರಿಯ ಮಾಹಿತಿ ಇದೀಗ ತಿಳಿದುಬಂದಿದೆ. ಒಂದೂವರೆ ತಿಂಗಳ ಹಿಂದಷ್ಟೇ ಟಿಟಿ ಖರೀದಿಸಿದ್ದ ಭದ್ರಾವತಿಯ ಆದರ್ಶ್ ಕುಟುಂದಬರನ್ನು ಕರೆದುಕೊಂಡು ಯಾತ್ರಾಸ್ಥಳಗಳಿಗೆ ತೆರಳಿ ವಾಪಸ್ ಬರುವಾಗ ಘಟನೆ ಸಂಭವಿಸಿದೆ. ಈ ಬಗ್ಗೆ ಆದರ್ಶ್ ಸ್ನೇಹಿತರೊಬ್ಬರು ‘ಟಿವಿ9’ ಜತೆ ಮಾತನಾಡಿ ಮಾಹಿತಿ ನೀಡಿದ್ದಾರೆ. ವಿಡಿಯೋ ಇಲ್ಲಿದೆ.

ಹಾವೇರಿ ಅಪಘಾತ: ತಿಂಗಳ ಹಿಂದೆ ಟಿಟಿ ಖರೀದಿ, ಪೂಜೆ ಮಾಡಿಸಿ ಬರುವಾಗ ಘೋರ ದುರಂತ; ಮೃತನ ಸ್ನೇಹಿತರು ಹೇಳಿದ್ದೇನು ನೋಡಿ
| Updated By: ಗಣಪತಿ ಶರ್ಮ

Updated on: Jun 28, 2024 | 10:01 AM

ಬೆಂಗಳೂರು, ಜೂನ್ 28: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಮೃತಪಟ್ಟಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾಗಿದ್ದಾರೆ. ಮೃತರ ಪೈಕಿ ಆದರ್ಶ್ ಎಂಬವರು ಒಂದೂವರೆ ತಿಂಗಳ ಹಿಂದೆ ಹೊಸ ಟಿಟಿ ವಾಹನ ಖರೀದಿಸಿದ್ದರು. ಅದರಲ್ಲಿ ಕುಟುಂಬದವರನ್ನು, ಸ್ನೇಹಿತರನ್ನು ಕರೆದುಕೊಂಡು ಮನೆ ದೇವರಿಗೆ ಪೂಜೆ ಸಲ್ಲಿಸಲೆಂದು ಪ್ರವಾಸ ಹೊರಟಿದ್ದರು. ಆ ಬಗ್ಗೆ ಆದರ್ಶ್ ಸ್ನೇಹಿತ ‘ಟಿವಿ9‘ ಜತೆ ಮಾತನಾಡಿದ್ದಾರೆ.

ಆದರ್ಶ್ ಅವರ ಗೆಳೆಯ ಸಾಗರ್ ಎಂಬವರು ಬೆಳಗ್ಗೆ ಕರೆ ಮಾಡಿ ಅಪಘಾತವಾಗಿರುವ ಬಗ್ಗೆ ಸುಳಿವು ನೀಡಿದರು. ಎಲ್ಲ ಕಡೆ ವಿಚಾರಿಸಲು ಪ್ರಯತ್ನಿಸಿದೆ. ಕೊನೆಗೆ ಬ್ಯಾಡಗಿ ಕಡೆಯಲ್ಲಿ ಅಪಘಾತವಾಗಿದೆ ಎಂಬ ಮಾಹಿತಿ ದೊರೆಯಿತು. ಅವರ ಕುಟುಂಬದವರು ಎಲ್ಲರೂ ಟಿಟಿಯಲ್ಲಿದ್ದರು. ಸವದತ್ತಿ, ಚನ್ನಗಿರಿ ಎಲ್ಲ ಯಾತ್ರೆ ಮಾಡಿ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ ಎಂದು ಸ್ನೇಹಿತ ತಿಳಿಸಿದ್ದಾರೆ.

ಇದನ್ನೂ ಓದಿ: ಹಾವೇರಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ 13 ಜನ ಸಾವು

ಆದರ್ಶ್ ಸುಮಾರು ಒಂದೂವರೆ ತಿಂಗಳ ಹಿಂದೆ ಶಿಕಾರಿಪುರದಲ್ಲಿ ಹೊಸ ಟಿಟಿ ಖರೀದಿ ಮಾಡಿದ್ದರು. ಹೊಸ ವಾಹನಕ್ಕೆ ಪೂಜೆ ಮಾಡಿಸಲು ಹೋಗಿದ್ದ ಕುಟುಂಬದವರು ಸೋಮವಾರ (ಜೂನ್ 24) ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಿವಮೊಗ್ಗದಿಂದ ಹೊರಟು, ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಸ್ಥಾನ ತಲುಪಿದ್ದರು. ಅಲ್ಲಿ ವಾಹನ ಪೂಜೆ ಮಾಡಿಸಿ, ಬಳಿಕ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ನಂತರ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಬೆಳಗಾವಿ ಜಿಲ್ಲೆ ಸವದತ್ತಿಗೆ ಆಗಮಿಸಿ, ಇಲ್ಲಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us