ಪ್ರಜ್ವಲ್ ರೇವಣ್ಣ ಕ್ಯಾಂಡಿಡೇಟ್ ಆಗೋದು ಬೇಡ ಅಂದಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಎಚ್ಡಿಕೆ
HD Kumaraswamy press conference: ಪ್ರಜ್ವಲ್ ರೇವಣ್ಣ ಹಿರಿಯರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಈ ಬಾರಿ ಹಾಸನದಲ್ಲಿ ಕ್ಯಾಂಡಿಡೇಟ್ ಬದಲಿಸಿ ಎಂದು ಕಾರ್ಯಕರ್ತರು ಕೇಳಿದ್ದರು. ಹೀಗಾಗಿ, ಪ್ರಜ್ವಲ್ ರೇವಣ್ಣಗೆ ಈ ಬಾರಿ ಟಿಕೆಟ್ ಕೊಡದೇ ಇರಲು ನಿರ್ಧರಿಸಿದ್ದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಮ್ಮ ಹಾಗೂ ರೇವಣ್ಣ ಕುಟುಂಬದ ನಡುವೆ ಮನಸ್ತಾಪ ಇದೆ ಎನ್ನುವ ಆರೋಪವನ್ನು ತಳ್ಳಿಹಾಕಿದ್ದಾರೆ.
ಬೆಂಗಳೂರು, ಮೇ 7: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ನಲ್ಲಿ (Prajwal Revanna sex scandal case) ಆರೋಪ ಪ್ರತ್ಯಾರೋಪ, ವಾಗ್ಯುದ್ಧಗಳ ಮಧ್ಯೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ದೇವೇಗೌಡರ ಕುಟುಂಬ ಒಡೆದಿದೆ. ರೇವಣ್ಣ ಕುಟುಂಬವನ್ನು ಕುಮಾರಸ್ವಾಮಿ ನಾಶ ಮಾಡಲು ಹೊರಟಿದ್ದಾರೆ ಎನ್ನುವಂತಹ ಕಾಂಗ್ರೆಸ್ ನಾಯಕ ಆರೋಪವನ್ನು ಎಚ್ಡಿಕೆ ತಳ್ಳಿಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬೇಡ ಎಂದು ತಾನು ನಿಲುವು ತೆಗೆದುಕೊಂಡ ಸಂಗತಿಯನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಆದರೆ, ಆ ನಿಲುವಿಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಪ್ರಜ್ವಲ್ ದೊಡ್ಡವರಿಗೆ ಗೌರವ ಕೊಡಲ್ಲ, ಸರಿಯಾಗಿ ನಡೆದುಕೊಳ್ಳುವುದಿಲ್ಲ. ಈ ಬಾರಿ ಕ್ಯಾಂಡಿಡೇಟ್ ಬದಲಿಸಿ ಎಂದು ಕಾರ್ಯಕರ್ತರು ಕೇಳಿದ್ದರು. ಹೀಗಾಗಿ ಪ್ರಜ್ವಲ್ಗೆ ಟಿಕೆಟ್ ಕೊಡುವುದು ಬೇಡ ಎಂದು ತಾನು ನಿರ್ಧರಿಸಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು, ಪೆನ್ ಡ್ರೈವ್ ಕೇಸ್ನಲ್ಲಿ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮುಂದುವರಿಸಿದ ಕುಮಾರಸ್ವಾಮಿ, ‘ಮನುಷ್ಯತ್ವ ಇದ್ಯೇನ್ರೀ ಇವ್ರಿಗೆ… ಪಾಪ ಯೋಗೇಶ್ವರ್ ಮಗಳನ್ನು ಕಾಂಗ್ರೆಸ್ಗೆ ತಂದು ಉದ್ಧಾರ ಮಾಡ್ತಾರಂತೆ… 2002ರಲ್ಲೂ ಬಂದಿತ್ತು ಒಂದ್ ವಿಷ್ಯ. ಅದು ಈಗ ಬೇಡ…’ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ತಮಗೆ ಬೇಕಾಗುವ ರೀತಿಯಲ್ಲಿ ಹೇಳಿಕೆ ನೀಡಲು ಎಸ್ಐಟಿ ಅಧಿಕಾರಿಗಳು ರೇವಣ್ಣ ಮೇಲೆ ಒತ್ತಡ ಹೇರುತ್ತಿದ್ದಾರೆ: ಕುಮಾರಸ್ವಾಮಿ
ರೇವಣ್ಣ ಕುಟುಂಬ ಬೇರೆ, ತಮ್ಮ ಕುಟುಂಬ ಬೇರೆ ಎಂದು ಹೇಳಲಾಗುತ್ತಿದೆ ಎನ್ನುವ ಆರೋಪಕ್ಕೂ ಕುಮಾರಸ್ವಾಮಿ ಈ ವೇಳೆ ತಿರುಗೇಟು ನೀಡಿದರು. ಪ್ರಜ್ವಲ್ ಅವರಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ತಾನು ಹೇಳಿದ್ದು ನಿಜ ಎಂದು ತಮ್ಮ ಹೇಳಿಕೆಯನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ