ಕಳ್ಳನ ಬ್ಯಾಂಕ್ ದರೋಡೆ ಯಶ ಕಂಡಿತಾದರೂ ಸಾರ್ವಜನಿಕರಿಂದ ತಪ್ಪಿಸಿಕೊಂಡು ಪರಾರಿಯಾಗುವುದು ಸಾಧ್ಯವಾಗಲಿಲ್ಲ!

ದರೋಡೆ ನಡೆದಿರುವುದು ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಎಸ್ ಬಿ ಐ ಶಾಖೆಯಲ್ಲಿ. ಪ್ರವೀಣ ಕುಮಾರ್ ಸಾಯಂಕಾಲದ ಸಮಯದಲ್ಲಿ ಶಾಖೆಯೊಳಗೆ ನುಗ್ಗಿದ್ದಾನೆ. ಕ್ಯಾಶಿಯರ್‌ಗೆ ಚಾಕು ತೋರಿಸಿ ರೂ. 6.39 ಲಕ್ಷ ಬಾಚಿಕೊಂಡಿದ್ದಾನೆ. ಅಲ್ಲಿಯವರೆಗೆ ಎಲ್ಲವೂ ಅವನು ಅಂದುಕೊಂಡಂತೆಯೇ ನಡೆದಿದೆ

TV9kannada Web Team

| Edited By: Arun Belly

Jan 19, 2022 | 7:04 PM

ಕಳ್ಳರು ಬ್ಯಾಂಕೊಂದಕ್ಕೆ ನುಗ್ಗಿ ಕ್ಯಾಶಿಯರ್​ಗೆ (cashier) ಚಾಕು ಇಲ್ಲವೇ ಪಿಸ್ತೂಲು ತೋರಿಸಿ ಹಣ ದೋಚಿಕೊಂಡು ಹೋಗುವ ದೃಶ್ಯಗಳನ್ನು ನಾವು ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಸಿನಿಮೀಯ ರೀತಿಯಲ್ಲೇ ಹುಬ್ಬಳ್ಳಿಯಲ್ಲಿ (Hubballi) ಮಂಗಳವಾರ ದರೋಡೆಯ ವಿಫಲ ಪ್ರಯತ್ನ ನಡೆದಿದೆ. ವಿಫಲ ಪ್ರಯತ್ನ ಅಂತ ಹೇಳುತ್ತಿರುವುದು ಯಾಕೆಂದರೆ, ಕಳ್ಳ ಹಣ ದೋಚಿಕೊಂಡೆನೋ ಬ್ಯಾಂಕ್ ನಿಂದ ಆಚೆ ಹೋಗಿದ್ದಾನೆ. ಆದರೆ, ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಕಳ್ಳ ನಿಮಗೆ ವಿಡಿಯೋನಲ್ಲಿ ಕಾಣಿಸುತ್ತಿದ್ದಾನೆ. ಅವನ ಹೆಸರು ಪ್ರವೀಣ ಕುಮಾರ್ ಅಪ್ಪಾಸಾಹೇಬ ಪಾಟೀಲ (Praveenkumar Appasaheb Patil). ಹೆಸರು ನೋಡಿದರೆ ಒಳ್ಳೆಯ ಮನೆತನಕ್ಕೆ ಸೇರಿದವನಂತೆ ಕಾಣುತ್ತಾನೆ ಕಳ್ಳ ಮಹಾಶಯ. ಮನೆತನದ ಹೆಸರು ಕೆಡಿಸುವ ಕೆಲಸಕ್ಕೆ ಅವನು ಇಳಿದಿರುವುದು ದುರದೃಷ್ಟಕರ. ಸಾರ್ವಜನಿಕರು ಮತ್ತು ಪೊಲೀಸ್ ಘೇರಾಯಿಸಿ ಹಿಡಿದರೂ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಾನೆ. ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿರುವವರಿಗೆ ಬೆದರಿಸುತ್ತಾನೆ.

ದರೋಡೆ ನಡೆದಿರುವುದು ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಎಸ್ ಬಿ ಐ ಶಾಖೆಯಲ್ಲಿ. ಪ್ರವೀಣ ಕುಮಾರ್ ಸಾಯಂಕಾಲದ ಸಮಯದಲ್ಲಿ ಶಾಖೆಯೊಳಗೆ ನುಗ್ಗಿದ್ದಾನೆ. ಕ್ಯಾಶಿಯರ್‌ಗೆ ಚಾಕು ತೋರಿಸಿ ರೂ. 6.39 ಲಕ್ಷ ಬಾಚಿಕೊಂಡಿದ್ದಾನೆ. ಅಲ್ಲಿಯವರೆಗೆ ಎಲ್ಲವೂ ಅವನು ಅಂದುಕೊಂಡಂತೆಯೇ ನಡೆದಿದೆ. ಆದರೆ, ಅವನು ಹಣ ಎತ್ತಿಕೊಂಡು ಹೊರಹೋದ ಕೂಡಲೇ ಬ್ಯಾಂಕ್ ಸಿಬ್ಬಂದಿ ಜೋರಾಗಿ ಕೂಗಾಡಿ ಹೊರಗಿದ್ದ ಜನರನ್ನು ಅಲರ್ಟ್ ಮಾಡಿದ್ದಾರೆ.

ಸಾರ್ವಜನಿಕರು ಅವನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಅಲ್ಲೇ ಇದ್ದ ಒಬ್ಬ ಸಂಚಾರಿ ಪೊಲೀಸ್ ಸ್ಥಳಕ್ಕೆ ಪ್ರವೀಣ ಕುಮಾರನನ್ನು ವಶಕ್ಕೆ ತೆಗೆದುಕೊಂಡಿದ್ದಾರಾದರೂ ಅವರಿಗೆ ಅವನು ಮಣಿಯುತ್ತಿಲ್ಲ. ಸಾರ್ವಜನಿಕರು ಅವನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಂತಿಮವಾಗಿ ಅವನನ್ನು ಆಟೋವೊಂದರಲ್ಲಿ ತಳ್ಳಿ ಹುಬ್ಬಳ್ಳಿಯ ಶಹರ ಪೊಲೀಸ್ ಸ್ಟೇಷನ್ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲೇ ಅವನ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ:  ಮೇಕಪ್​ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್​

Follow us on

Click on your DTH Provider to Add TV9 Kannada