ಬಟ್ಟೆ ಬಿಚ್ಚೊವರೆಗೂ ಬಿಡಲ್ಲ: ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಚಿಕ್ಕಮಗಳೂರು ಜಿಲ್ಲೆಯ ನಂದಿಹೊಸಹಳ್ಳಿಯ ತಾರಾ ತಮ್ಮ ಪತಿ ತಿಮ್ಮಪ್ಪ ಮತ್ತು ಮಾವ ಗುಂಡಪ್ಪರಿಂದ ದೀರ್ಘಕಾಲದ ದೌರ್ಜನ್ಯಕ್ಕೊಳಗಾಗಿದ್ದಾರೆ. ಗಂಡು ಮಗು ಬೇಕೆಂದು ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇತ್ತೀಚೆಗೆ ಊಟ ಮಾಡುತ್ತಿದ್ದಾಗ ವಿವಸ್ತ್ರಗೊಳಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ನ್ಯಾಯಕ್ಕಾಗಿ ಪೊಲೀಸರ ನೆರವು ಪಡೆದಿರುವ ತಾರಾ, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
ಚಿಕ್ಕಮಗಳೂರು, ಜ.2: ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಹೊಸಹಳ್ಳಿಯಲ್ಲಿ ಪತಿ ತನ್ನ ಪತ್ನಿಗೆ ಗಂಡು ಮಗು ಬೇಕೆಂದು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಈ ಪ್ರಕರಣದಲ್ಲಿ ಪತಿ ತಿಮ್ಮಪ್ಪ ಮತ್ತು ಮಾವ ಗುಂಡಪ್ಪ ಅವರನ್ನು ಬಂಧಿಸಲಾಗಿದೆ. ತಾರಾ ಎಂಬ ಮಹಿಳೆ ಡಿ.29ರಂದು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಾರಾ ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಟಿವಿ9 ಜತೆಗೆ ಹಂಚಿಕೊಂಡಿದ್ದಾರೆ, ಊಟ ಮಾಡುತ್ತಿದ್ದಾಗ ತನ್ನ ತಟ್ಟೆಯನ್ನು ಕಿತ್ತು ನೆಲಕ್ಕೆಸೆದು, ನಂತರ ಬಟ್ಟೆ ಬಿಚ್ಚಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾಗಿ ವಿವರಿಸಿದ್ದಾರೆ. ತಾರಾ ಅವರ ಹೇಳಿಕೆಯ ಪ್ರಕಾರ, ಈ ಘಟನೆಯು ಸಂಜೆ ನಡೆದಿದೆ. ಅವರು ತಮ್ಮ ಕೆಲಸ ಮುಗಿಸಿ ಊಟಕ್ಕೆ ಕುಳಿತಿದ್ದಾಗ, ಪತಿ ತಿಮ್ಮಪ್ಪ “ನನಗೆ ಊಟ ಹಾಕಲ್ಲ, ನೀನು ಮಾತ್ರ ಊಟ ಮಾಡುತ್ತೀಯಾ” ಎಂದು ಹೇಳಿದ್ದಾನೆ. ನಂತರ ಆಕೆಯನ್ನು ವಿವಸ್ತ್ರಗೊಳಿಸಿ, ದೊಣ್ಣೆಯಿಂದ ಹೊಡೆದಿದ್ದಾನೆ. ತಾರಾ ಹಿಂಬಾಗಿಲಿನಿಂದ ಓಡಿಹೋಗಿ ಟವಲ್ ಸುತ್ತಿಕೊಂಡು ನೆರೆಮನೆಯವರ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಾರೆ. ಲಿಂಗದಹಳ್ಳಿ ಪೊಲೀಸರ ಸಹಕಾರದಿಂದ ತಾವು ಜೀವಂತ ಉಳಿದಿರುವುದಾಗಿ ತಾರಾ ತಿಳಿಸಿದ್ದು, ತಮಗೆ ನ್ಯಾಯ ಸಿಗಬೇಕು ಎಂದು ಬೇಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪತಿ ಕುಟುಂಬ ಸದಸ್ಯರಿಂದ ಬೆದರಿಕೆ ಕರೆಗಳೂ ಬರುತ್ತಿವೆ ಎಂದು ಅವರು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

