ತನ್ನ ವಿರುದ್ಧ ಚಾರ್ಜ್​ಶೀಟ್ ಹೊಂದಿರುವ ವ್ಯಕ್ತಿಯೊಬ್ಬ ಕೇಂದ್ರ ಸಚಿವನಾಗಿದ್ದು ಹೇಗೆ? ಎಎಸ್ ಪೊನ್ನಣ್ಣ

|

Updated on: Aug 20, 2024 | 3:12 PM

ಮುಡಾ ಪ್ರಕರಣವನ್ನು ಸಿಎಂ ಕಾನೂನು ಸಲಹೆಗಾರ ಸರಿಯಾಗಿ ನಿರ್ವಹಿಸದ ಕಾರಣ ಸಿದ್ದರಾಮಯ್ಯನವರಿಗೆ ಸಂಕಷ್ಟ ಎದುರಾಯಿತು ಎಂಬ ಅರೋಪಗಳಿಗೆ ಪ್ರತಿಕ್ರಿಯೆ ನೀಡಿದ ಪೊನ್ನಣ್ಣ ನಗುತ್ತಾ, ಅದನ್ನು ಮುಖ್ಯಮಂತ್ರಿಯವರನ್ನೇ ಕೇಳಬೇಕು, ತನಗಿರುವ ಕಾನೂನು ಅರಿವಿನ ಅನುಗುಣವಾಗಿ ಸಲಹೆ ನೀಡಿದ್ದೇನೆ ಎಂದು ಹೇಳಿದರು.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಏನೆಲ್ಲ ನಡೆಯಲಿದೆ ಅನ್ನೋದನ್ನು ಊಹಿಸುವುದು ಕಷ್ಟವಾಗುತ್ತಿದೆ. ಮುಡಾ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಾಸಿಕ್ಯೂಷನ್ ಅನುಮತಿ ನೀಡಿದ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಕಂಟಕ ಎದುರಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ, 2017ರಲ್ಲಿ ಅಕ್ರಮವಾಗಿ ಮೈನಿಂಗ್ ಗೆ ಲೀಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ರಚಿಸಿದ ಎಸ್ಐಟಿ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಯಾಕೆಂದರೆ ಲೋಕಾಯುಕ್ತ ಒಂದು ಸ್ವಾಯತ್ತ ಸಂಸ್ಥೆ ಮತ್ತು ಒಬ್ಬ ಐಜಿ ರ್ಯಾಂಕಿನ ಲೋಕಾಯುಕ್ತ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆದಿದೆ ಎಂದು ಪೊನ್ನಣ್ಣ ಹೇಳಿದರು.

ಕುಮಾರಸ್ವಾಮಿಯವರು ವಿನೋದ್ ಹೆಸರಿನ ವ್ಯಕ್ತಿಗೆ ಕಾನೂನುಬಾಹಿರವಾಗಿ ಮೈನಿಂಗ್ ಲೀಸ್ ನೀಡಿದ್ದಾರೆ, ಸುಪ್ರೀಮ್ ಕೋರ್ಟ್ ಆದೇಶದ ಮೇರೆಗೆ ಈ ತನಿಖೆ ನಡೆದಿದೆ, 2018 ರಲ್ಲಿ ಕುಮಾರಸ್ವಾಮಿವರು ಎಸ್ಐಟಿ ಚಾರ್ಜ್​ಶೀಟ್ ಅನ್ನು ತಿರುಚಿ ಹೇಳುವ ಪ್ರಯತ್ನ ಮಾಡಿದರು, ಅವರ ವಿರುದ್ಧ ದೋಷಾರೋಪಣೆ ಸಲ್ಲಿಕೆಯಾಗಿರುವುದರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಪೊನ್ನಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಿದ್ದರಾಮಯ್ಯ ರೀತಿ ಕುಮಾರಸ್ವಾಮಿಗೆ ಸಂಕಷ್ಟ: ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಗೆ ಪತ್ರ ಬರೆದ SIT