AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯ ಮೂರು ಸಾವಿರ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಗರ

ಹುಬ್ಬಳ್ಳಿಯ ಮೂರು ಸಾವಿರ ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಗರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 18, 2021 | 9:43 PM

ಮೂರು ಸಾವಿರಮಠದ ವಿದ್ಯಾಸಂಸ್ಥೆಗಳು ನಾಡಿನಾದ್ಯಂತ ಪ್ರಸಿದ್ಧವಾಗಿವೆ. ಮಹಿಳೆಯರೂ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಉನ್ನತ ಆಶಯದೊಂದಿಗೆ ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

ಹುಬ್ಬಳ್ಳಿಯ ಮೂರು ಸಾವಿರ ಮಠದ ಬಗ್ಗೆ ಕನ್ನಡನಾಡಿನಲ್ಲಿ ಯಾರಾದರೂ ಕೇಳದವರಿದ್ದಾರೆಯೇ? ಈ ಮಠದ ಪ್ರಸಿದ್ಧಿಯೇ ಅಂಥದ್ದು. ಉತ್ತರ ಕರ್ನಾಟಕದ ಪ್ರಮುಖ ಮತ್ತು ಅತಿದೊಡ್ಡ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಗೆ ಭೇಟಿ ನೀಡಿದವರು ಮೂರು ಸಾವಿರ ಮಠವನ್ನು ನೋಡದೆ ವಾಪಸ್ಸು ಹೋಗರು. ಮಠವು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಸಂಸ್ಥೆಗಳ ಸಮೂಹ ಕೇಂದ್ರವಾಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಿ ಅದನ್ನು ವಿಶ್ವಕಲ್ಯಾಣಕ್ಕೆ ಉಪಯೋಗಿಸುವುದು ಕೇಂದ್ರದ ಗುರಿ ಮತ್ತು ಉದ್ದೇಶವಾಗಿದೆ.

12ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಮೂರು ಸಾವಿರ ಮಠದಲ್ಲಿ ಅಂದಿನ ಸಂಸ್ಥಾಪಕರಾದ ಗುರುಸಿದ್ದೇಶ್ವರ ಸ್ವಾಮಿಗಳ ಸಮಾಧಿ ಇದೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಲಿಂಗಾಯತ ಧರ್ಮದ ಅತ್ಯಂತ ಪೂಜ್ಯ ಶ್ರೀಗಳಲ್ಲಿ ಒಬ್ಬರಾಗಿರುವ ಶ್ರೀ ಚೆನ್ನಬಸವಣ್ಣನವರು ಪುಣ್ಯಕ್ಷೇತ್ರ ಉಳವಿಗೆ ಹೋಗುವಾಗ 3,000 ಶಿವಶರಣರ ಜೊತೆ ಈ ಮಠದಲ್ಲಿ ತಂಗಿದ್ದರಂತೆ.

ಅವರ ಕೋರಿಕೆಯ ಮೇರೆಗೆ ಶಿವಶರಣರು ಅಲ್ಲೇ ಉಳಿದು ಲಿಂಗಾಯತ ಧರ್ಮವನ್ನು ವಿಶ್ವಕ್ಕೆ ಸಾರತೊಡಗಿದರು. ಆಗಲೇ ಅವರು ಶ್ರೀ ಗುರುಸಿದ್ದೇಶ್ವರ ಅವರನ್ನು ಮೂರು ಸಾವಿರ ಶರಣರ ಮುಖಂಡರನ್ನಾಗಿ ನೇಮಕ ಮಾಡಲಾಗಿತ್ತು. ಹಾಗಾಗೇ, ಈ ಮಠಕ್ಕೆ ಮೂರು ಸಾವಿರ ಮಠ ಅಂತ ಹೆಸರು ಬಂದಿದೆ. 12 ನೇ ಶಿರಸಿಯ ಶಿಲಾಶಾಸನದಲ್ಲಿ ಮೂರು ಸಾವಿರ ಮಠದ ಉಲ್ಲೇಖವಿದೆ. ಇದನ್ನು ಅಲ್ಲಮ ಪ್ರಭುವಿನ ಶೂನ್ಯ ಪರಂಪರೆಯ ಮಠ ಅಂತಲೂ ಕರೆಯುತ್ತಾರೆ.

ಸಿದ್ದೇಶ್ವರರ ಸಮಾಧಿಯನ್ನು ಭಕ್ತರು ಹುಚ್ಚನ ಗದ್ದಿಗೆ ಅಂತ ಹೇಳುವುದುಂಟು, ಮತ್ತು ಅದನ್ನು ಬೆಂಕಿಯ ಕುಂಡ ಎಂದು ಪರಿಗಣಿಸಲಾಗುತ್ತದೆ. ಆತನ ಅಂಗಾರದ ಕೈ ಹಿಡಿದು ಆಣೆ ಮಾಡಿದರೆ, ಸಮಸ್ಯೆ ಬಗೆಹರಿಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮಠದ ನಿರ್ಮಾಣಕ್ಕೆ ಆಗ ಅವನತಿ ಹೊಂದಿದ ಕಿತ್ತೂರು ಚೆನ್ನಮ್ಮನ ಸಂಸ್ಥಾನದಿಂದ ಕಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಮೂರು ಸಾವಿರಮಠದ ವಿದ್ಯಾಸಂಸ್ಥೆಗಳು ನಾಡಿನಾದ್ಯಂತ ಪ್ರಸಿದ್ಧವಾಗಿವೆ. ಮಹಿಳೆಯರೂ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಉನ್ನತ ಆಶಯದೊಂದಿಗೆ ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ:  ‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ