ನಾನು ದ್ರಾವಿಡ, ಈ ದೇಶದ ಮೂಲ ನಿವಾಸಿ! ಎಂದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 28, 2022 | 9:34 PM

ಮುಖ್ಯಮಂತ್ರಿಗಳು ಮತ್ತು ಬೇರೆ ನಾಯಕರೆಲ್ಲ ಸ್ವಾತಂತ್ರ್ಯ ಸಿಕ್ಕ ಮೇಲೆ ಹುಟ್ಟಿದವರು, ಇತಿಹಾಸದ ಬಗ್ಗೆ ಅವರಿಗೇನು ಗೊತ್ತು? ಆರ್ಯನ್ನರು ಮಧ್ಯ ಏಷ್ಯಾದಿಂದ ಬಂದವರಲ್ಲ ಅಂತ ಅವರು ಹೇಳಲಿ ನೋಡೋಣ. ಇವರೆಲ್ಲ ಸೇರಿ ಇತಿಹಾಸವನ್ನು ಸುಳ್ಳು ಮಾಡಲು ಹೊರಟಿದ್ದಾರೆ ಎಂದು ಸಿದ್ದಾರಾಮಯ್ಯ ಹೇಳುತ್ತಾರೆ.

Tumakuru: ಆರ್ ಎಸ್ ಎಸ್ (RSS) ಮೂಲ ಯಾವುದು ಅಂತ ಸಿದ್ದರಾಮಯ್ಯ (Siddaramaiah) ಕೇಳಿದ್ದು ಭಾರಿ ಸದ್ದು ಮಾಡುತ್ತಿದೆ ಮಾರಾಯ್ರೇ. ಅವರು ಹಾಗೆ ಹೇಳಿದ್ದಕ್ಕೆ ಶನಿವಾರ ಬೆಂಗಳೂರಲ್ಲಿ ಕಟುವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ ಸಿದ್ದರಾಮಯ್ಯ ತಮ್ಮ ಮೂಲ ಯಾವುದು ಅಂತ ಹೇಳಲಿ ಅಂದಿದ್ದರು. ತುಮಕೂರಲ್ಲಿ ನಡೆದ ಕುರುಬ ಸಮಾವೇಶದಲ್ಲಿ ಟಿವಿ9 ವರದಿಗಾರ ಪ್ರಮೋದ್ ಶಾಸ್ತ್ರಿ ಜೊತೆ ಮಾತಾಡಿದ ಸಿದ್ದರಾಮಯ್ಯನವರು, ನಾನು ದ್ರಾವಿಡ (Dravidian), ಈ ದೇಶದ ಮೂಲ ನಿವಾಸಿ ಅಂತ ಖಡಾಖಂಡಿತವಾಗಿ ಹೇಳಿದರು. ಮುಂದುವರಿದು ಮಾತಾಡಿದ ವಿರೋಧ ಪಕ್ಷದ ನಾಯಕರು, ಆರ್ ಎಸ್ ಎಸ್ ಮೂಲ ಯಾವುದು ಬಿಜೆಪಿಯವರಿಗೂ ಗೊತ್ತಿಲ್ಲ, ನಾನು ಹೇಳ್ತೀನಿ ಕೇಳಿ, ಆರ್ ಎಸ್ ಎಸ್ ಜೀವ ತಳೆದಿದ್ದು 1925 ರಲ್ಲಿ, ಸಂಸ್ಥಾಪಕರು ಹೆಡ್ಗೇವಾರ, ಅವರ ಬಳಿಕ ಅಧ್ಯಕ್ಷರಾಗಿದ್ದು ಗೊನ್ವಾಲ್ಕರ್. ಈ ಸಂಘಟನೆ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಲಿಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ ಯಾರೂ ಹುತಾತ್ಮರಾಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಾವೆಲ್ಲ ಓದಿರುವ ಇತಿಹಾಸದ ಪಾಠಗಳ ಪ್ರಕಾರ ಆರ್ಯನ್ನರು ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದಿರುವವರು. ಮುಖ್ಯಮಂತ್ರಿಗಳು ಮತ್ತು ಬೇರೆ ನಾಯಕರೆಲ್ಲ ಸ್ವಾತಂತ್ರ್ಯ ಸಿಕ್ಕ ಮೇಲೆ ಹುಟ್ಟಿದವರು, ಇತಿಹಾಸದ ಬಗ್ಗೆ ಅವರಿಗೇನು ಗೊತ್ತು? ಆರ್ಯನ್ನರು ಮಧ್ಯ ಏಷ್ಯಾದಿಂದ ಬಂದವರಲ್ಲ ಅಂತ ಅವರು ಹೇಳಲಿ ನೋಡೋಣ. ಇವರೆಲ್ಲ ಸೇರಿ ಇತಿಹಾಸವನ್ನು ಸುಳ್ಳು ಮಾಡಲು ಹೊರಟಿದ್ದಾರೆ ಎಂದು ಸಿದ್ದಾರಾಮಯ್ಯ ಹೇಳುತ್ತಾರೆ.

ಮೆಕಾಲೆ ಥಿಯರಿ ಬಗ್ಗೆ ಮಾತಾಡುವ ಸಿಟಿ ರವಿಗೆ ಇಂಡಿಯನ್ ಪೀನಲ್ ಕೋಡ್ ಮತ್ತು ಇಂಡಿಯನ್ ಎವಿಡೆನ್ಸ್ ಌಕ್ಟ್ ಮೆಕಾಲೆಯೇ ಬರೆದಿದ್ದು ಅಂತ ಗೊತ್ತಿದೆಯೇ? ಆರ್ಯರು ಮತ್ತು ದ್ರಾವಿಡರ ರಕ್ತ ಒಂದೇ ಎಂಬ ಮೆಕಾಲೆಯ ವಾದವನ್ನೇ ರವಿ ಸರಿ ಅನ್ನೋದಾದರೆ, ಅವನೇ ರಚಿಸಿರುವ ಐಪಿಸಿ ಮತ್ತು ಎವಿಡೆನ್ಸ್ ಌಕ್ಟ್ ಇನ್ನೂ ಯಾಕೆ ಇನ್ನೂ ಅನುಸರಣೆ ಮಾಡುತ್ತಾರೆ, ತೆಗೆದು ಹಾಕಲಿ ಎಂದು ಸಿದ್ದರಾಮಯ್ಯ ಸವಾಲು ಎಸೆದರು.

ಸೋನಿಯಾ ಗಾಂಧಿಯವರು ಈ ದೇಶದ ಪೌರತ್ವ ಪಡೆದುಕೊಂಡಿರುವುದರಿಂದ ಅವರು ಭಾರತದಲ್ಲಿ ಹುಟ್ಟದಿದ್ದರೂ ಭಾರತೀಯರು. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಇಂಥ ವಿಷಯಗಳನ್ನು ಕೆದಕುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.