ಐಎಎಫ್ ವಿಮಾನ ಪತನವಾಗಿ ಪೈಲಟ್ ಲೋಕೇಂದ್ರ ಸಿಂಧು ಸಾವು; 1 ತಿಂಗಳ ಮಗುವಿನಿಂದ ಅಪ್ಪನಿಗೆ ಅಂತಿಮನಮನ

Updated on: Jul 11, 2025 | 8:44 PM

ರಾಜಸ್ಥಾನದಲ್ಲಿ ನಡೆದ ಜಾಗ್ವಾರ್ ಫೈಟರ್ ಜೆಟ್ ಅಪಘಾತವು ಐಎಎಫ್ ಪೈಲಟ್ ಲೋಕೇಂದರ್ ಸಿಂಗ್ ಅವರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಕೇವಲ ಒಂದು ತಿಂಗಳ ಹಿಂದೆ ಅವರಿಗೆ ಗಂಡು ಮಗುವಾಗಿತ್ತು. ಆ ಪುಟ್ಟ ಮಗು ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಸೇರಿಕೊಂಡಿತು. ಐಎಎಫ್ ಪೈಲಟ್ ಲೋಕೇಂದರ್ ಸಿಂಗ್ ಸಿಂಧು ಅವರ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಅವರ ಪತ್ನಿ 'ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ' ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರ 1 ತಿಂಗಳ ಶಿಶು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿತು.

ಚಂಡೀಗಢ (ಜು.11): ರಾಜಸ್ಥಾನದ ಚುರು ಬಳಿ ಬುಧವಾರ ನಡೆದ ಜಾಗ್ವಾರ್ ಫೈಟರ್ ಜೆಟ್ ಅಪಘಾತ(IAF Fighter Jet Crash) ದಲ್ಲಿ ಸಾವನ್ನಪ್ಪಿದ ಇಬ್ಬರು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್‌ಗಳಲ್ಲಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್ ಲೋಕೇಂದ್ರ ಸಿಂಗ್ ಸಿಂಧು ಕೇವಲ 1 ತಿಂಗಳ ಹಿಂದೆ ಗಂಡುಮಗುವಿಗೆ ತಂದೆಯಾಗಿದ್ದರು. ಅವರ ಇಡೀ ಕುಟುಂಬ ಇದೇ ಸಂಭ್ರಮದಲ್ಲಿತ್ತು. ಆದರೆ, ಆ ಸಂಭ್ರಮಾಚರಣೆ ಮಧ್ಯೆ ಲೋಕೇಂದ್ರ ಸಿಂಗ್ ಅವರ ಅನಿರೀಕ್ಷಿತ ಸಾವು ಇಡೀ ಕುಟುಂಬವನ್ನು ಕಂಗಾಲಾಗಿಸಿದೆ. ಇಂದು ಅವರ ಊರಿನಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ಲೋಕೇಂದ್ರ ಸಿಂಗ್‌ ಅವರಿಗೆ ಅಂತಿಮ ನಮನವನ್ನು ಸಲ್ಲಿಸಲು ಅವರ 1 ತಿಂಗಳ ಪುತ್ರನನ್ನೂ ತಾಯಿ ಎತ್ತಿಕೊಂಡು ಬಂದಿದ್ದರು. ಈ ವೇಳೆ ಲೋಕೇಂದ್ರ ಸಿಂಗ್‌ ಸಿಂಧು ಅವರ ತಂದೆ ಮೊಮ್ಮಗನನ್ನು ಎತ್ತಿ ಹಿಡಿದು ತಂದೆಯ ಶವ ಪೆಟ್ಟಿಗೆಯನ್ನು ಮುಟ್ಟಿಸಿದಾಗ ಅಲ್ಲಿ ಭಾವುಕ ಕ್ಷಣ ನಿರ್ಮಾಣವಾಯಿತು.

ಹರಿಯಾಣದ ರೋಹ್ಟಕ್‌ನ ಖೇರಿ ಸಾಧ್ ಗ್ರಾಮದ ಲೋಕೇಂದ್ರ ಸಿಂಗ್ ಸಿಂಧು ವಿಮಾನ ಅಪಘಾತ ನಡೆಯುವ ಕೆಲವೇ ಗಂಟೆಗಳ ಮೊದಲು ತಮ್ಮ ಕುಟುಂಬದೊಂದಿಗೆ ವೀಡಿಯೊ ಕಾಲ್ ಮೂಲಕ ಮಾತನಾಡಿದ್ದರು. ಇಂದು ತನ್ನ ಗಂಡನ ಅಂತ್ಯಕ್ರಿಯೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಅವರ ಹೆಂಡತಿ ‘ನಮಗೆ ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಗಂಡನ ಶವಪೆಟ್ಟಿಗೆಗೆ ಮುತ್ತನ್ನಿಟ್ಟಿದ್ದಾರೆ. ಐಎಎಫ್ ಪೈಲಟ್ ಲೋಕೇಂದ್ರ ಸಿಂಗ್ ಸಿಂಧು ಅವರ ಅಂತ್ಯಕ್ರಿಯೆಯನ್ನು ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jul 11, 2025 08:08 PM