ದೊಂಬಿ ಗಲಾಟೆಗಳಿಗೆ ಕಾರಣವಾಗುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಆಯೋಜಿಸುವುದರಲ್ಲಿ ಅರ್ಥವಿಲ್ಲ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ದೊಂಬಿ ಗಲಾಟೆಗಳಿಗೆ ಕಾರಣವಾಗುವ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಆಯೋಜಿಸುವುದರಲ್ಲಿ ಅರ್ಥವಿಲ್ಲ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 23, 2021 | 11:08 PM

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಆಡಿಸುವ, ಆಯೋಜಿಸುವ ಪ್ರಸ್ತುತತೆಯನ್ನು ಪ್ರಶ್ನಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಯುಎಇನಲ್ಲಿ ಆರಂಭವಾಗಿದೆ. ನಾಳೆ ಅಂದರೆ ರವಿವಾರದಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಇಡೀ ಕ್ರಿಕೆಟ್ ವಿಶ್ವವೇ ಕೌತುಕದಿಂದ ಎದರು ನೋಡುತ್ತಿರುವ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಎರಡೂ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಯುಎಈಯಲ್ಲೇ ನಡೆದ ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಆಡಿರುವ ಭಾರತದ ಎಲ್ಲ ಆಟಗಾರರು ಅಲ್ಲಿನ ವಾತಾವರಣಕ್ಕೆ ಮತ್ತು ಪಿಚ್ ಕಂಡೀಷನ್ಗಳಿಗೆ ಚೆನ್ನಾಗಿ ಒಗ್ಗಿಕೊಂಡಿದ್ದಾರೆ. ಟಿ20 ಕ್ರಿಕೆಟ್ ಆವೃತ್ತಿಯಲ್ಲಿ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದೆ. ಆ ತಂಡಕ್ಕೆ ಅನ್ಪ್ರಿಡಕ್ಟೇಬಲ್ಸ್ ಎಂಬ ಉಪನಾಪವೂ ಇದೆ. ಹಾಗಾಗಿ ನಾಳಿನ ಪಂದ್ಯದ ರೋಚಕವಾಗಿರರುವುದರಲ್ಲಿ ಸಂದೇಹವಿಲ್ಲ. ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಯೇನೆಂದರೆ, ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಾಡಿರುವ ಎಲ್ಲ ಪಂದ್ಯಗಳಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಸೋಲಿಸಿದೆ.

ಏತನ್ಮಧ್ಯೆ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು, ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಆಡಿಸುವ, ಆಯೋಜಿಸುವ ಪ್ರಸ್ತುತತೆಯನ್ನು ಪ್ರಶ್ನಿಸಿದ್ದಾರೆ. ಶನಿವಾರದಂದು ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸ್ವಾಮೀಜಿಗಳು, ಕ್ರೀಡಾಳುಗಳಲ್ಲಿ ನಿಜವಾದ ಕ್ರೀಡಾಸ್ಫೂರ್ತಿ ಇಲ್ಲದಿದ್ದರೆ, ಪಂದ್ಯಗಳನ್ನು ಆಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಮೈದಾನದಲ್ಲಿ ಆಟಗಾರರು ಪರಸ್ಪರ ಬೈದಾಡುತ್ತಾರೆ, ಕೈ-ಕೈ ಮಿಲಾಯಿಸುತ್ತಾರೆ, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಹೇಳುತ್ತಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ದೊಂಬಿ ಮತ್ತು ಗಲಾಟೆಗಳಿಗೆ ಕಾರಣವಾಗುತ್ತದೆ. ಆಟವನ್ನು ಒಂದು ಯುದ್ಧದಂತೆ ಪರಿಗಣಿಸಲಾಗುತ್ತಿದೆ. ಪಾಕಿಸ್ತಾನದ ಒಬ್ಬ ಉದ್ಯಮಿ, ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ತಂಡವನ್ನು ಸೋಲಿಸಿದರೆ, ಅಲ್ಲಿನ ಕ್ರಿಕೆಟ್ ಮಂಡಳಿಗೆ ಬ್ಲ್ಯಾಂಕ್ ಚೆಕ್ ಕೊಡುವುದಾಗಿ ಹೇಳಿರುವುದು ಎರಡು ದೇಶಗಳ ಮಧ್ಯೆ ಎಂಥ ವೈರತ್ವವಿದೆ ಎನ್ನುವುದನ್ನು ಬಿಂಬಿಸುತ್ತದೆ, ಆ ಉದ್ಯಮಿಯ ಮಾತು ಕೇಳಿದರೆ ಇದೇನು ಕ್ರಿಕೆಟ್ ಪಂದ್ಯವೋ ಇಲ್ಲ ಯುದ್ಧವೋ ಎನ್ನುವ ಸಂಶಯ ಮೂಡುತ್ತದೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯ ನಡೆದರೆ ಅನರ್ಥಗಳೇ ಹೆಚ್ಚು ಸಂಭವಿಸುವುದರಿಂದ ಅವುಗಳನ್ನು ಆಯೋಜಿಸದಿರುವುದೇ ಒಳಿತು ಎಂದು ಸ್ವಾಮೀಜಿ ಹೇಳಿದ್ದಾರೆ.

ಇದನ್ನೂ ಓದಿ:   T20 world cup 2021: ಪಾಕ್​ಗೆ ಮಣ್ಣು ಮುಕ್ಕಿಸಲು ಬಲಿಷ್ಠ ಪಡೆ: ಸಂಭಾವ್ಯ ಟೀಮ್ ಇಂಡಿಯಾ ಪ್ಲೇಯಿಂ​ಗ್​ 11

Published on: Oct 23, 2021 10:16 PM