
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಸೋತಿದ್ದ ಟೀಂ ಇಂಡಿಯಾ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಳ್ಳುವ ಮೂಲಕ ಟೆಸ್ಟ್ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡಿದೆ. ಟೀಂ ಇಂಡಿಯಾದ ಈ ಸರಣಿ ಗೆಲುವಿನಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಪ್ರಮುಖ ಪಾತ್ರವಹಿಸಿದರು.

ಸರಣಿ ಮೂರು ಪಂದ್ಯಗಳಲ್ಲಿ ಕ್ರಮವಾಗಿ 135, 102 ಹಾಗೂ ಅಜೇಯ 65 ರನ್ ಬಾರಿಸಿದ ಕೊಹ್ಲಿ ತಂಡವನ್ನು ಸರಣಿ ಗೆಲುವಿನತ್ತ ಮುನ್ನಡೆಸಿದರು. ಈ ಪ್ರದರ್ಶನದ ಫಲವಾಗಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಇದು ವಿರಾಟ್ ಅವರ 12 ನೇ ಏಕದಿನ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿದೆ. ಇನ್ನು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ ಏನು ಹೇಳಿದರು ಎಂಬುದನ್ನು ನೋಡುವುದಾದರೆ..

ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸರಣಿಯಲ್ಲಿ ನಾನು ಆಡಿದ ರೀತಿ ನನಗೆ ಸಂತೋಷ ನೀಡಿದೆ. ಈಗ ನನ್ನ ಮನಸ್ಸಿನಲ್ಲಿ ಒಂದು ರೀತಿಯ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇನೆ. ಹೌದು ಕಳೆದ 2-3 ವರ್ಷಗಳಲ್ಲಿ ನಾನು ಈ ರೀತಿ ಬ್ಯಾಟಿಂಗ್ ಮಾಡಿಲ್ಲ.

ನಾನು ಮಧ್ಯಮ ಕ್ರಮಾಂಕದಲ್ಲಿ ಈ ರೀತಿಯ ಪ್ರದರ್ಶನ ನೀಡುವುದು ತಂಡಕ್ಕೆ ದೊಡ್ಡ ಪ್ರಯೋಜನವನ್ನು ನೀಡುತ್ತದೆ ಎಂದು ನನಗೆ ತಿಳಿದಿದೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ನನ್ನನ್ನು ನಿಭಾಯಿಸಲು ಮತ್ತು ಪಂದ್ಯವನ್ನು ತಂಡದ ಪರವಾಗಿ ತಿರುಗಿಸಲು ನನಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.

ಇನ್ನು ಈ ಸರಣಿಯಲ್ಲಿ ಕೊಹ್ಲಿ ಸರಾಗವಾಗಿ ಸಿಕ್ಸರ್ಗಳನ್ನು ಹೊಡೆಯುವುದು ಕಂಡುಬಂತು. ಈ ಬಗ್ಗೆ ಮಾತನಾಡಿದ ಕೊಹ್ಲಿ, ‘ನೀವು 15-16 ವರ್ಷಗಳ ಕಾಲ ಆಡುವಾಗ, ಕೆಲವೊಮ್ಮೆ ನೀವು ನಿಮ್ಮನ್ನು ಅನುಮಾನಿಸುತ್ತೀರಿ, ವಿಶೇಷವಾಗಿ ಬ್ಯಾಟ್ಸ್‌ಮನ್ ಆಗಿ, ಏಕೆಂದರೆ ನೀವು ಮಾಡುವ ಒಂದು ತಪ್ಪು ನಿಮ್ಮನ್ನು ಪೆವಿಲಿಯನ್ಗೆ ಕಳುಹಿಸಬಹುದು. ಆದರೆ ಈ ಪ್ರಯಾಣವು ನಿಮ್ಮನ್ನು ಸುಧಾರಿಸುವುದರ ಜೊತೆಗೆ ಇದು ನಿಮ್ಮ ಮನೋಧರ್ಮ ಮತ್ತು ನಿಮ್ಮ ಆಲೋಚನೆ ಎರಡನ್ನೂ ಬದಲಾಯಿಸುತ್ತದೆ. ನಾನು ಮುಕ್ತವಾಗಿ ಆಡಿದಾಗ, ನಾನು ದೊಡ್ಡ ಹೊಡೆತಗಳನ್ನು ಸಹ ಹೊಡೆಯಬಲ್ಲೆ ಎಂದು ನನಗೆ ತಿಳಿದಿದೆ ಎಂದರು.

ಇದರ ಜೊತೆಗೆ ಈ ಸರಣಿಯಲ್ಲಿ ತಮ್ಮ ಅತ್ಯುತ್ತಮ ಇನ್ನಿಂಗ್ಸ್ ಯಾವುದು ಎಂಬುದನ್ನು ವಿವರಿಸಿದ ಕೊಹ್ಲಿ, ‘ಆಸ್ಟ್ರೇಲಿಯಾ ನಂತರ ನಾನು ಯಾವುದೇ ಪಂದ್ಯವನ್ನು ಆಡದ ಕಾರಣ ರಾಂಚಿಯಲ್ಲಿ ನಡೆದ ಮೊದಲ ಪಂದ್ಯ ನನಗೆ ತುಂಬಾ ವಿಶೇಷವಾಗಿತ್ತು. ಆ ದಿನ ನನಗೆ ವಿಭಿನ್ನವಾದ ಚೈತನ್ಯ ಮೂಡಿತು. ಈ ಮೂರು ಪಂದ್ಯಗಳು ನನಗೆ ತುಂಬಾ ವಿಶೇಷವಾದವು, ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದರು.
Published On - 10:35 pm, Sat, 6 December 25