ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಟೀಮ್ ಇಂಡಿಯಾ
Disability Champions Trophy 2025: ಈ ಬಾರಿಯ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಕಣಕ್ಕಿಳಿದಿದ್ದವು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಆಡಿದ್ದು, ಅಂತಿಮ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ.
ಶ್ರೀಲಂಕಾದಲ್ಲಿ ನಡೆದ ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಲಂಬೊದಲ್ಲಿ ನಡೆದ ಚೊಚ್ಚಲ ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ದಿವ್ಯಾಂಗ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯೋಗೇಂದ್ರ ಬಧೋರಿಯಾ 40 ಎಸೆತಗಳಲ್ಲಿ 73 ರನ್ ಬಾರಿಸಿ ಮಿಂಚಿದರು. ಈ ಅರ್ಧಶತಕದ ನೆರವಿನಿಂದ ಭಾರತ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿತು.
198 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಇದಾಗ್ಯೂ ಅಲೆಕ್ಸ್ ಹಮ್ಮೊಂಡ್ 35 ಎಸೆತಗಳಲ್ಲಿ 35 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಮತ್ತೊಂದೆಡೆ ಉತ್ತಮ ದಾಳಿ ಸಂಘಟಿಸಿದ ರಾಧಿಕ ಪ್ರಸಾದ್ ಕೇವಲ 19 ರನ್ ನೀಡಿ 4 ವಿಕೆಟ್ ಕಬಳಿಸಿದರು.
ಟೀಮ್ ಇಂಡಿಯಾದ ಸಾಂಘಿಕ ಪ್ರದರ್ಶನದ ಮುಂದೆ ವಿಚಲಿತರಾದ ಇಂಗ್ಲೆಂಡ್ ತಂಡವು ಅಂತಿಮವಾಗಿ 19.2 ಓವರ್ಗಳಲ್ಲಿ 118 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ 79 ರನ್ಗಳ ಅಮೋಘ ಜಯ ಸಾಧಿಸಿ ಟೀಮ್ ಇಂಡಿಯಾ ಚೊಚ್ಚಲ ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಭಾರತ ತಂಡ: ವಿಕ್ರಾಂತ್ ರವೀಂದ್ರ ಕೆನ್ನಿ (ನಾಯಕ), ರವೀಂದ್ರ ಗೋಪಿನಾಥ್ ಸಂತೆ (ಉಪನಾಯಕ), ಯೋಗೇಂದರ್ ಬಧೋರಿಯಾ, ಅಖಿಲ್ ರೆಡ್ಡಿ, ರಾಧಿಕ ಪ್ರಸಾದ್, ದೇವೇಂದ್ರ ಸಿಂಗ್ (ವಿಕೆಟ್ ಕೀಪರ್), ಆಕಾಶ್ ಅನಿಲ್ ಪಾಟೀಲ್, ಸನ್ನಿ ಗೋಯತ್, ಪವನ್ ಕುಮಾರ್, ಜಿತೇಂದ್ರ, ರಾಜೇಶ್ ನಿಖಿಲ್ ಮನ್ಹಾಸ್, ಅಮೀರ್ ಹಾಸನ್, ಮಜಿದ್ ಮಗರೆ, ಕುನಾಲ್ ದತ್ತಾತ್ರೇಯ ಫಣಸಾಯ್.
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

