ಉಕ್ರೇನಲ್ಲಿರುವ ವಿದ್ಯಾರ್ಥಿಗಳು ವಿಡಿಯೋಗಳ ಮೂಲಕ ರಾಜ್ಯ ಮತ್ತು ಭಾರತ ಸರ್ಕಾರದ ನೆರವು ಯಾಚಿಸುತ್ತಿದ್ದಾರೆ
ನವ್ಯ ಉಕ್ರೇನಿನ ಪೂರ್ವ ಭಾಗಕ್ಕಿರುವ ಖಾರ್ಕಿವ್ ವಿಶ್ವವಿದ್ಯಾಲಯದ ಅಧೀನದ ಮೆಡಿಕಲ್ ಕಾಲೇಜೊಂದರಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಖಾರ್ಕಿವ್ ಮೆಟ್ರೋ ಸ್ಟೇಶನ್ ಒಂದರಲ್ಲಿ ಅವರು ಮತ್ತು ಇನ್ನೂ ಹಲವಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಶ್ರಯ ಪಡೆದಿದ್ದಾರೆ.
ನಮ್ಮ ಕನ್ನಡದ ಹುಡುಗಿ ನವ್ಯ (Navya) ಒಂದು ವಿಡಿಯೋ ಮಾಡಿ ಕಳಿಸಿದ್ದಾರೆ. ನವ್ಯ ಮತ್ತು ಅವರಂತೆಯೇ ಉಕ್ರೇನಿಗೆ ಓದಲು ಹೋಗಿರುವ ಎಲ್ಲ ಭಾರತೀಯ ವಿದ್ಯಾರ್ಥಿನಿಯರ ಸ್ಥಿತಿ ಹೆಚ್ಚು ಕಡಿಮೆ ಇದೇ ತೆರನಾಗಿದೆ. ನವ್ಯ ಉಕ್ರೇನಿನ ಪೂರ್ವ ಭಾಗಕ್ಕಿರುವ ಖಾರ್ಕಿವ್ ವಿಶ್ವವಿದ್ಯಾಲಯದ (Kharkiv University) ಅಧೀನದ ಮೆಡಿಕಲ್ ಕಾಲೇಜೊಂದರಲ್ಲಿ (medical college) ನಾಲ್ಕನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಖಾರ್ಕಿವ್ ಮೆಟ್ರೋ ಸ್ಟೇಶನ್ ಒಂದರಲ್ಲಿ ಅವರು ಮತ್ತು ಇನ್ನೂ ಹಲವಾರು ವಿದ್ಯಾರ್ಥಿಗಳು ಹಾಗೂ ನಾಗರಿಕರು ಆಶ್ರಯ ಪಡೆದಿದ್ದಾರೆ. ನವ್ಯ ಹೇಳುವ ಹಾಗೆ ನಿನ್ನೆ ಅಂದರೆ ಗುರುವಾರ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಅವರೆಲ್ಲ ಕಾಲೇಜಿಗೆ ಹೋಗಿದ್ದಾರೆ, ಹೊರಗಡೆ ತಿರುಗಾಡಿದ್ದಾರೆ-ಗಾಬರಿಗೊಳಗಾಗುವ ಯಾವುದೇ ಸಂಗತಿ ಸಂಭವಿಸಿರಲಿಲ್ಲ.
‘ಆದರೆ, ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ರಷ್ಯಾ ಖಾರ್ಕಿವ್ ಮೇಲೆ ಬಾಂಬ್ ದಾಳಿ ಶುರುಮಾಡಿತು, ಅವುಗಳ ಸದ್ದಿನಿಂದ ನಾವು ಭಯಗ್ರಸ್ಥರಾದೆವು, ಆತಂಕಿತರಾದೆವು,’ ಎಂದು ನವ್ಯ ಹೇಳುತ್ತಾರೆ. ಬಾಂಬ್ ಗಳು ಸತತವಾಗಿ ಸ್ಫೋಟಗೊಳ್ಳತೊಡಗಿದ ನಂತರ ತಮ್ಮನ್ನು ಬಾಂಬ್ ಮತ್ತು ವಾರ್ ಶೆಲ್ಟರ್ ಸ್ಥಳಗಳಿಗೆ ತೆರಳುವಂತೆ ಹೇಳಲಾಯಿತು. ಮೆಟ್ರೋ ಸ್ಟೇಷನ್ ಗಳನ್ನು ಆಶ್ರಯ ಸ್ಥಳಗಳಾಗಿರುವುದರಿಂದ ಇಲ್ಲಿಗೆ ಬಂದಿರುವುದಾಗಿ ನವ್ಯ ಹೇಳುತ್ತಾರೆ.
ಆದಷ್ಟು ಬೇಗ ತಮ್ಮನ್ನು ಇಲ್ಲಿಂದ ಕರೆದೊಯ್ಯುವ ಏರ್ಪಾಟನ್ನು ಕರ್ನಾಟಕ ಮತ್ತು ಭಾರತ ಸರ್ಕಾರ ಮಾಡಬೇಕೆಂದು ನವ್ಯ ಅಗ್ರಹಿಸುತ್ತಾರೆ.
‘ತುಂಬಾ ಆತಂಕಗಗೊಂಡಿದ್ದೇವೆ, ಭಯಗ್ರಸ್ಥರಾಗಿದ್ದೇವೆ, ಇವತ್ತಿನ ಸ್ಥಿತಿ ಹೀಗಿದೆ, ನಾಳೆ ಏನು ಕಾದಿದೆಯೋ? ಗ್ರೋಸರಿ ಶಾಪ್ ಗಳ ಒಂದೂವರೆ ಕಿಲೋಮೀಟರ್ ನಷ್ಟು ಉದ್ದದ ಕ್ಯೂಗಳಿವೆ. ಅಂಗಡಿಗಳಲ್ಲಿ ಸಾಮಗ್ರಿಗಳು ವೇಗವಾಗಿ ಖಾಲಿಯಾಗುತ್ತಿವೆ. ಎಟಿಎಮ್ ಗಳಲ್ಲೂ ದುಡ್ಡಿಲ್ಲ, ನಮ್ಮಲ್ಲಿರುವ ಆಹಾರ ಪದಾರ್ಥಗಳು ಮುಗಿದರೆ ಏನು ಮಾಡೋದು ಗೊತ್ತಾಗುತ್ತಿಲ್ಲ. ನಮಗಿಂತ ಜಾಸ್ತಿ ನಮ್ಮ ತಂದೆತಾಯಿಗಳು ಪ್ಯಾನಿಕ್ ಆಗಿದ್ದಾರೆ. ನಾವೆಲ್ಲ ಬಹಳ ಶೋಚನೀಯ ಸ್ಥಿತಿಯಲ್ಲಿರುವುದರಿಂದ ಸರ್ಕಾರಗಳು ಆದಷ್ಟು ಬೇಗ ನಮ್ಮನ್ನು ಕರೆದೊಯ್ಯುವ ವ್ಯವಸ್ಥೆ ಮಾಡಬೇಕು ಎಂದು,’ ನವ್ಯ ಹೇಳಿದರು.
ನವ್ಯ ಅವರೊಂದಿಗಿದ್ದ ಇಬ್ಬರ ಕನ್ನಡೇತರ ವಿದ್ಯಾರ್ಥಿಗಳು ಈ ವಿಡಿಯೋನಲ್ಲಿ ಮಾತಾಡಿದ್ದು ಅವರು ಸಹ ಇದೇ ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಮಾಹಿತಿ:
ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ಪೋರ್ಟಲ್ ಸ್ಥಾಪಿಸಿದೆ. ಉಕ್ರೇನ್ನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.
ವೆಬ್ ಪೋರ್ಟಲ್ ಲಿಂಕ್: http://Ukraine.Karnataka.tech
ಇದನ್ನೂ ಓದಿ: Russia- Ukraine War: ಉಕ್ರೇನ್ನ ಹೊಸಕಿ ಹಾಕುವಷ್ಟು ಸಿಟ್ಟೇಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ? ಇಲ್ಲಿದೆ ಮಾಹಿತಿ